ದೇಶಾದ್ಯಂತ ತೀವ್ರ ವಿವಾದ ಹುಟ್ಟು ಹಾಕಿದ್ದ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಸಿಡಿ ಇಲ್ಲವೆಂದು ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಏತನ್ಮಧ್ಯೆ ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿಗಳು ಸುಳ್ಳೆಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ನಿತ್ಯಾನಂದ ಸ್ವಾಮಿ ತಿಳಿಸಿದ್ದಾರೆ.
ಬಿಡದಿಯ ಧ್ಯಾನಪೀಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಐಡಿ ಪೊಲೀಸರು ಸಿಡಿ ಇಲ್ಲವೆಂದು ನುಣುಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮಾಣಪತ್ರದ ನಕಲನ್ನು ಬಿಡುಗಡೆಗೊಳಿಸಿದ ನಿತ್ಯಾನಂದ,ಸಿಡಿಯನ್ನು ಖಾಸಗಿ ಸುದ್ದಿವಾಹಿನಿಗೆ ಮಾರಾಟ ಮಾಡಿದ ಸಂಜಯ್ ಮಾರ್ಕೆಟಿಂಗ್ ಕಂಪನಿ ನೌಕರನ ವಿರುದ್ಧ ಪ್ರಕರಣ ದಾಖಲಿಸದೆ ನಿರ್ಲಕ್ಷಿಸಿರುವ ಸಿಐಡಿ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ದೂರಿದರು.
ನಪುಂಸಕ, ತಾಂತ್ರಿಕ ಸೆಕ್ಸ್ ಪಂಡಿ, ಅವಾವಾಸ್ಯೆ ಮತ್ತು ಹುಣ್ಣಿಮೆಗೆ ಲೈಂಗಿಕ ವಿಕೃತಿ ನಡೆಸುತ್ತಾನೆ, ರಂಜಿತಾ ಸೇರಿದಂತೆ 15 ಚಿತ್ರನಟಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಸುದ್ದಿಗಳು ಪ್ರಕಟಗೊಂಡಿದ್ದರಿಂದ ತಮ್ಮ ಮೇಲೆ ಸಾರ್ವಜನಿಕವಾಗಿ ಬೂಟು ಎಸೆಯುವಂತಹ ಘಟನೆ ನಡೆಯಲು ಕಾರಣವಾಯಿತು. ಅಷ್ಟೇ ಅಲ್ಲ 17 ಕಡೆ ಭಕ್ತರ ಸೀರೆ ಎಳೆದು ಅವಮಾನಿಸಲಾಯಿತು. 300ಕ್ಕೂ ಹೆಚ್ಚು ಬೆದರಿಕೆ ಕರೆಗಳನ್ನು ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಯಿತು. ಇದರಿಂದಾಗಿ ಆಶ್ರಮದ ವರ್ಚಸ್ಸಿಗೆ ಹಾನಿಯಾಗಿದ್ದು, ಇದೀಗ ಸಿಐಡಿ ಪೊಲೀಸರು ಎಲ್ಲವನ್ನೂ ನಿರಾಕರಿಸಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಸಲೀಲೆ ಪ್ರಕರಣದಲ್ಲಿನ ನಿತ್ಯಾನಂದನ ವಕೀಲ ಟಿವಿ ಧನಂಜಯ ಪ್ರತಿಕ್ರಿಯಿಸಿ, ದೋಷಾರೋಪಣೆ ಪಟ್ಟಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಗಾಗಿ ಸಿಐಡಿ ಪೊಲೀಸರಿಗೆ ನ್ಯಾಯಾಲಯ ತಕ್ಕಪಾಠ ಕಲಿಸಲಿದ್ದು ಮುಂದೆ ಸ್ವಾಮೀಜಿಯ ಪ್ರಾಮಾಣಿಕತೆ ಬೆಳಕಿಗೆ ಬರುತ್ತದೆ ಎಂದು ಹೇಳಿದರು.