ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ದಕ್ಷ-ಭ್ರಷ್ಟತೆ ಕೇವಲ ಗ್ರಹಿಕೆ ಮಾತ್ರ!: ಗಡ್ಕರಿ (B.S. Yeddyurappa | BJP | Nitin Gadkari | corruption | Karnataka | Lokpal)
ಯಡಿಯೂರಪ್ಪ ದಕ್ಷ-ಭ್ರಷ್ಟತೆ ಕೇವಲ ಗ್ರಹಿಕೆ ಮಾತ್ರ!: ಗಡ್ಕರಿ
ನವದೆಹಲಿ, ಭಾನುವಾರ, 10 ಏಪ್ರಿಲ್ 2011( 11:38 IST )
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅಣ್ಣಾ ಹಜಾರೆ ಸಮರಕ್ಕೆ ದೇಶವ್ಯಾಪಿ ಬೆಂಬಲ ವ್ಯಕ್ತವಾಗುವ ಮೂಲಕ ಕೊನೆಗೂ ಕೇಂದ್ರ ಸರಕಾರ ಜನಶಕ್ತಿಗೆ ಮಣಿದಿದ್ದರೆ, ಮತ್ತೊಂದೆಡೆ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ಬಿಎಸ್‌ವೈ ಭ್ರಷ್ಟತೆ ಕೇವಲ ಗ್ರಹಿಕೆ ಎಂದು ಹೇಳಿ ಹೊಸ ವ್ಯಾಖ್ಯಾನ ನೀಡಿ ಸಮರ್ಥಿಸಿಕೊಂಡಿದ್ದಾರೆ.
ಗ್ರಹಿಕೆ ಮತ್ತು ವಾಸ್ತವತೆ ಇದರ ನಡುವಿನ ತಿಕ್ಕಾಟವೇ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪವಾಗಿದೆ. ಈ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅದು ಕೇವಲ ಗ್ರಹಿಕೆ ಮಾತ್ರ. ವಾಸ್ತವತೆ ನೆಲೆಯಲ್ಲಿ ನೋಡಿದರೆ ಯಡಿಯೂರಪ್ಪ ಸಮರ್ಥ, ದಕ್ಷ ಮುಖ್ಯಮಂತ್ರಿ ಎಂದು ಗಡ್ಕರಿ ವಾದ ಮಂಡಿಸಿದ್ದಾರೆ.
ದೆಹಲಿಯಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟದ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಿದ್ದ ವೇಳೆ ಭ್ರಷ್ಟಾಚಾರದ ಗುರುತರವಾದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಿರುವ ಬಗ್ಗೆ ಹಲವು ಉದ್ಯಮಿಗಳಿಂದ ತೂರಿಬಂದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳುತ್ತೀರಿ, ಆದರೆ ನಿಮ್ಮದೇ ಪಕ್ಷದ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಉದ್ಯಮಿ ರಾಹುಲ್ ಬಜಾಜ್ ಪ್ರಶ್ನಿಸಿದಾಗ, ಅದು ಗ್ರಹಿಕೆ ಮತ್ತು ವಾಸ್ತವತೆ ನಡುವಿನ ತಿಕ್ಕಾಟ ಎಂದರು. ವಾಸ್ತವವಾಗಿ ಯಡಿಯೂರಪ್ಪ ಭ್ರಷ್ಟರಲ್ಲ ಎಂದ ಗಡ್ಕರಿ, ಅವರ ವಿರುದ್ಧ ಸಾಂವಿಧಾನಿಕವಾಗಿ ರಚಿತವಾಗಿರುವ ಸಂಸ್ಥೆಯೊಂದು ಯಾವುದಾದರೂ ಆರೋಪ ಹೊರಿಸಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ರಾಜಾ ಹಾಗೂ ಕಾಮನ್ವೆಲ್ತ್‌ನ ಸುರೇಶ್ ಕಲ್ಮಾಡಿ ವಿರುದ್ಧದ ಆರೋಪಗಳ ಸಂಬಂಧ ಸಿಎಜಿ ಹಾಗೂ ಸುಪ್ರೀಂಕೋರ್ಟ್ ಉಲ್ಲೇಖಿಸಿವೆ. ಯಡಿಯೂರಪ್ಪ ವಿರುದ್ಧದ ಆರೋಪಗಳೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿವೆಯಷ್ಟೇ ವಿನಃ ಯಾವುದೇ ಕೋರ್ಟ್, ಸಾಂವಿಧಾನಿಕ ಸಂಸ್ಥೆ ಹೇಳಿಲ್ಲ. ಆ ರೀತಿ ಆದೇಶ ಬಂದರೆ ಸಿಎಂ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.
ಭೂ ಹಗರಣ ಸಂಬಂಧ ಅವರು ಯಾವುದೇ ತಪ್ಪು ಮಾಡಿಲ್ಲ. ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದೇ ಹಂಚಿಕೆ ಮಾಡಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಧರಂಸಿಂಗ್, ಎಸ್.ಎಂ.ಕೃಷ್ಣ ಕೂಡ ಇದೇ ರೀತಿಯಲ್ಲಿ ಭೂ ಹಂಚಿಕೆ ಮಾಡಿದ್ದಾರೆ. ಆದರೆ ಅವರ ವಿರುದ್ಧದ ಆರೋಪಗಳು ಹೊರಬರಲೇ ಇಲ್ಲ. ಈಗ ಮಾತ್ರ ಯಡಿಯೂರಪ್ಪ ಅವರನ್ನು ಸಿಕ್ಕಿಸಲಾಗುತ್ತಿದೆ ಎಂದು ಆರೋಪಿಸಿದರು.