ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟಾಚಾರ ಮಾಡ್ದೆ ಪಕ್ಷ ಕಟ್ಟಲು ಸಾಧ್ಯವಿಲ್ಲ!: ಎಚ್‌ಡಿಕೆ (Kumaraswamy | BJP | Congress | JDS | Anna hazare | Curruption)
WD
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಇದ್ದಿದ್ದರೂ ಕೂಡ ಭ್ರಷ್ಟಾಚಾರ ಮಾಡಬೇಕಾದ ಸ್ಥಿತಿ ಬರುತ್ತಿತ್ತು, ಇಲ್ಲವೇ ರಾಜಕೀಯ ತೊರೆಯುತ್ತಿದ್ದರು. ಭ್ರಷ್ಟಾಚಾರವಿಲ್ಲದೆ ಪಕ್ಷ ಸಂಘಟನೆ, ರಾಜಕೀಯ ಮಾಡುವುದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ವವ್ಯಾಪಿಯಾಗಿರುವ ಭ್ರಷ್ಟಾಚಾರವನ್ನು ಏನೇ ಹೋರಾಟ ಮಾಡಿದರೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆ ನೆಲೆಗಟ್ಟಿನಲ್ಲಿ ನಾನು ನನ್ನ ಪ್ರಾಮಾಣಿಕ ಮಾತನ್ನು ಹೇಳಿದ್ದೇನೆ. ಇಂದಿನ ವ್ಯವಸ್ಥೆಯಲ್ಲಿ ರಾಜಕೀಯದಲ್ಲಿ ಭ್ರಷ್ಟಾಚಾರ ಅನಿವಾರ್ಯವಾಗಿದೆ ಎಂದರು.

ಹಾಗಾಗಿ ಈಗ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವರು ಬೇಕಿದ್ದರೆ ರಾಜಕೀಯ ಕ್ಷೇತ್ರ ಪ್ರವೇಶಿಸಲಿ, ಅವರು ಕೂಡ ಭ್ರಷ್ಟಾಚಾರ ಎಸಗಲೇಬೇಕಾಗುತ್ತದೆ. ಯಾರಿಗೂ ತಮ್ಮ ಮನೆಯಿಂದ ಹಣ ತಂದು ರಾಜಕೀಯ ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ರಾಜಕೀಯದಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ ಎಂಬುದು ಸತ್ಯ ಎಂದು ಹೇಳಿದರು.

ಅದೇ ರೀತಿ ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ನಾನು ಈಗಾಗಲೇ ದಾಖಲೆ ಸಹಿತ ಹೋರಾಟ ಮಾಡಿದರೂ ನಿಸ್ವಾರ್ಥಿಗಳಿಂದ ನನಗೆ ಬೆಂಬಲ ಸಿಕ್ಕಿಲ್ಲ. ಹಾಗಾಗಿ ಅಣ್ಣಾ ಹಜಾರೆಯಂತಹ ನಿಸ್ವಾರ್ಥ ವ್ಯಕ್ತಿ ಹೋರಾಟ ಮಾಡಲು ಬಂದರೆ ಅವರಿಗೆ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಭ್ರಷ್ಟಾಚಾರದ ಎಲ್ಲ ದಾಖಲೆ ಒದಗಿಸಲು ಸಿದ್ದ ಎಂದು ತಿಳಿಸಿದರು.

ವಕೀಲರಾಗಲಿ ಅಥವಾ ಸಾಹಿತಿಗಳಾಗಲಿ ನಿಸ್ವಾರ್ಥ ವ್ಯಕ್ತಿಗಳು ಮುಂದು ಬಂದು ರಾಜ್ಯದಲ್ಲೂ ಅಣ್ಣಾ ಹಜಾರೆ ಮಾದರಿಯಲ್ಲಿ ಹೋರಾಟ ಮಾಡಲಿ, ಭ್ರಷ್ಟಾಚಾರ ಕಿತ್ತೊಗೆಯಲಿ ಎಂಬುದು ನನ್ನ ಆಶಯವಾಗಿದೆ ಎಂದರು.

ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಯಶಸ್ವಿಯಾದ ಅಣ್ಣಾ ಹಜಾರೆ ಅವರಿಗೆ ನನ್ನ ಹಾಟ್ಸ್ ಆಫ್ ಎಂದ ಕುಮಾರಸ್ವಾಮಿ, ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಜನತೆಗೂ ಅಭಿನಂದನೆ ಸಲ್ಲಿಸಿದರು.

ಭ್ರಷ್ಟಾಚಾರದಿಂದ ಪಕ್ಷ ಸಂಘಟಿಸಿದ್ದೇನೆ ಅಂತ ಹೇಳಿಲ್ಲ:
ಭ್ರಷ್ಟಾಚಾರದ ಹಣದಲ್ಲಿ ನಾನು ರಾಜಕೀಯ ಮಾಡುತ್ತಿದ್ದೇನೆ ಅಂತ ಹೇಳಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ರಾಜಕೀಯ ಪಕ್ಷಗಳಿಗೆ ಅನಿವಾರ್ಯ ಎಂಬಂತಾಗಿದೆ ಎಂದು ತಿಳಿಸಿರುವುದಾಗಿ ಕುಮಾರಸ್ವಾಮಿ ಹಾವೇರಿಯಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿಲಾಗಿದೆ, ನಾನೂ ಕೂಡ ಭ್ರಷ್ಟಾಚಾರದ ಹಣದಲ್ಲಿ ರಾಜಕೀಯ ಮಾಡುತ್ತಿದ್ದೇನೆ ಎಂದು ಅರ್ಥವಲ್ಲ. ಒಟ್ಟಾರೆಯಾಗಿ ಇಂದಿನ ಸ್ಥಿತಿಯಲ್ಲಿ ರಾಜಕೀಯದ ವಿಷವರ್ತುಲದ ಬಗ್ಗೆ ನನ್ನ ಪ್ರಾಮಾಣಿಕ ಅನಿಸಿಕೆಯನ್ನು ಹೇಳಿರುವುದಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇವತ್ತಿನ ಸ್ಥಿತಿಯಲ್ಲಿ ಯಾರೂ ತಮ್ಮ ಮನೆಯಿಂದ ಹಣ ತಂದು ರಾಜಕೀಯ ಮಾಡಲು ಸಾಧ್ಯವಿಲ್ಲ. ಪಕ್ಷ ಕಟ್ಟುವುದಕ್ಕಾಗಿ ದಾನಿಗಳಿಂದ ನೆರವು ಪಡೆಯುವುದು ಅನಿವಾರ್ಯ, ಇನ್ನು ಕೆಲವರು ಯಾವುದೋ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆಯುತ್ತಾರೆ. ಇವೆಲ್ಲವೂ ಭ್ರಷ್ಟಾಚಾರದ ಮೂಲಗಳು ಎಂಬುದು ತನ್ನ ಅಭಿಪ್ರಾಯ ಎಂದರು.
ಇವನ್ನೂ ಓದಿ