ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಾಂಧಿ ಆತ್ಮಹತ್ಯೆ ಮಾಡಿಕೊಳ್ತಿದ್ದರು-ಗೌಡ; ತಪ್ಪಾಯ್ತು-ಎಚ್‌ಡಿಕೆ (Mahathma Gandhi | Kumaraswamy | JDS | Deve gowda | Congress | Anna hazare)
ಗಾಂಧಿ ಆತ್ಮಹತ್ಯೆ ಮಾಡಿಕೊಳ್ತಿದ್ದರು-ಗೌಡ; ತಪ್ಪಾಯ್ತು-ಎಚ್‌ಡಿಕೆ
ನವದೆಹಲಿ, ಮಂಗಳವಾರ, 12 ಏಪ್ರಿಲ್ 2011( 09:31 IST )
ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಬದುಕಿದ್ದಿದ್ದರೆ ಅವರೂ ಕೂಡ ಭ್ರಷ್ಟರಾಗುತ್ತಿದ್ದರು ಎಂದು ಹೇಳಿಕೆ ನೀಡಿ ತೀವ್ರ ಟೀಕೆಗೆ ಒಳಗಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಕ್ಷಮೆಯಾಚಿಸಿದ್ದಾರೆ. ಏತನ್ಮಧ್ಯೆ, ಪ್ರಸ್ತುತ ಗಾಂಧಿ ಇದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾನುವಾರ ಹುಬ್ಬಳ್ಳಿಯಲ್ಲಿ ಗಾಂಧೀಜಿ ಕುರಿತು ನೀಡಿದ್ದ ಹೇಳಿಕೆಗೆ ನವದೆಹಲಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಮಹಾತ್ಮ ಗಾಂಧೀಜಿ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಗಾಂಧೀಜಿ ಬಗ್ಗೆ ವ್ಯಂಗ್ಯದಿಂದ ಮಾತನಾಡಿಲ್ಲ. ಭ್ರಷ್ಟಾಚಾರ ಸರ್ವವ್ಯಾಪಿಯಾಗಿದ್ದು, ಆ ಹಿನ್ನೆಲೆಯಲ್ಲಿ ಅದರ ಗಂಭೀರತೆ ಕುರಿತು ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ದೂರಿದರು.
ರಾಜಕಾರಣಿಗಳಿಗೂ ಇರುವ ಸಂಕಷ್ಟದ ಬಗ್ಗೆ ಹೇಳಿದ್ದೇನೆ. ಬೆಳಿಗ್ಗೆ ಎದ್ದರೆ ಆಸ್ಪತ್ರೆ, ದೇವಸ್ಥಾನ, ವಂತಿಗೆ ಅಂತೆಲ್ಲ ಹೇಳಿ ಪ್ರತಿದಿನ ಒಂದು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ರಾಜಕೀಯದಲ್ಲಿ ಭ್ರಷ್ಟಾಚಾರ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದೇನೆ. ಹಾಗಂತ ನಾನೇನು ಸಂಪೂರ್ಣವಾಗಿ ಸತ್ಯಹರಿಶ್ಚಂದ್ರ ಅಂತ ಹೇಳಲ್ಲ. ರಾಜಕಾರಣಿಯ ತೊಂದರೆ ಹೇಳಿಕೊಂಡಿದ್ದೇನೆ. ಆದರೂ ಗಾಂಧೀಜಿ ಕುರಿತು ಆಡಿದ ಮಾತಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದರು.
ಏತನ್ಮಧ್ಯೆ ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಹೇಳಿಕೆ ಬಗ್ಗೆ ಚರ್ಚೆ ಅನಗತ್ಯ. ಯಾಕೆಂದರೆ ಇಂದು ಗಾಂಧೀಜಿ ಇದ್ದಿದ್ದರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ವ್ಯವಸ್ಥೆ ಅಷ್ಟೊಂದು ಹದಗೆಟ್ಟಿದೆ. ಹಾಗಾಗಿ ಗಾಂಧೀಜಿ ಬಗ್ಗೆ ಅವಹೇಳನ ಮಾಡಬೇಕೆಂದು ಕುಮಾರಸ್ವಾಮಿ ಆ ಮಾತನ್ನು ಆಡಿಲ್ಲ ಎಂದು ತಮ್ಮ ಪುತ್ರನ ಹೇಳಿಕೆಗೆ ಬೆಂಬಲವಾಗಿ ಮಾತನಾಡಿದರು.
ಬ್ರಿಟಿಷರು ಮಾಡದ ಕೆಲಸ ಎಚ್‌ಡಿಕೆ ಮಾಡಿದ್ದಾರೆ-ಸುರೇಶ್ ಕುಮಾರ್ ಮಹಾತ್ಮಾಗಾಂಧೀಜಿ ಪ್ರಸ್ತುವಾಗಿ ಇದ್ದಿದ್ದರೆ ಭ್ರಷ್ಟಾಚಾರ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬ್ರಿಟಿಷರೂ ಮಾಡದ ಕೆಲಸವನ್ನು ಮಾಡಿದ್ದಾರೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ಕಿಡಿಕಾರಿದ್ದರು. ಭ್ರಷ್ಟಾಚಾರದ ವಿರುದ್ಧ ಪದೇ, ಪದೇ ಧ್ವನಿ ಎತ್ತುವ ಕುಮಾರಸ್ವಾಮಿ ಭ್ರಷ್ಟಾಚಾರ ನಿರ್ಮೂಲನೆ ತಾನು ಗುತ್ತಿಗೆ ಪಡೆದಿದ್ದೇನೆ ಎಂಬ ಅರ್ಥದಲ್ಲಿ ಅವರು ವರ್ತಿಸುತ್ತಿದ್ದಾರೆ. ಅದೂ ಮಾಜಿ ಮುಖ್ಯಮಂತ್ರಿಯಾಗಿ ಗಾಂಧಿ ಬಗ್ಗೆ ಆ ರೀತಿ ಮಾತನಾಡಿರುವುದು ಆಘಾತಕಾರಿ ಸಂಗತಿ ಎಂದು ಹೇಳಿದರು.
ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕುಮಾರಸ್ವಾಮಿ ದೇಶದ ಕ್ಷಮೆಯಾಚಿಸಬೇಕೆಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಒತ್ತಾಯಿಸಿದ್ದರೆ, ಕುಮಾರಸ್ವಾಮಿ ಅವರ ರಾಜಕೀಯ ಭ್ರಷ್ಟಾಚಾರದ ನೆಲೆಗಟ್ಟಿನ ಮೇಲೆಯೇ ನಿಂತಿದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ವಾಗ್ದಾಳಿ ನಡೆಸಿದ್ದರು.