ವಿಶ್ವದಲ್ಲಿ ವಾಯು ಪ್ರಳಯ ಸಂಭವಿಸುತ್ತೆ: ಕೋಡಿಶ್ರೀ ಭವಿಷ್ಯ
ರಾಯಚೂರು, ಮಂಗಳವಾರ, 12 ಏಪ್ರಿಲ್ 2011( 09:51 IST )
ಈ ಬಾರಿಯ ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕದಲ್ಲಿ ಜಲಪ್ರಳಯ ಉಂಟಾಗಲಿದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 2009ರಲ್ಲಿ ಉತ್ತರ ಕರ್ನಾಟಕವನ್ನೇ ಬೆಚ್ಚಿಬೀಳಿಸಿದ ಜಲಪ್ರಳಯ ಮತ್ತೆ ಸಂಭವಿಸಲಿದೆ ಎಂದು ಹೇಳಿದ್ದಾರೆ.
ರಾಯಚೂರಿನ ಕವಿತಾಳದಲ್ಲಿರುವ ಕಲ್ಮಠದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಕೋಡಿ ಮಠದ ಶಿವರುದ್ರಸ್ವಾಮೀಜಿ ಸುದ್ದಿಗಾರರ ಜತೆ ಮಾತನಾಡುತ್ತ ಈ ಭವಿಷ್ಯ ನುಡಿದಿದ್ದಾರೆ.
ಕೇವಲ ಉತ್ತರ ಕರ್ನಾಟಕವಷ್ಟೇ ಅಲ್ಲ, ಇಡೀ ಜಗತ್ತಿಗೆ ಪ್ರಾಕೃತಿಕ ವಿಕೋಪ ಆವರಿಸಿಕೊಳ್ಳಲಿದೆ. ವಿಶೇಷವಾಗಿ ವಾಯು(ಗಾಳಿ)ನಿಂದ ಆಗುವ ಪ್ರಳಯ ಭಾರೀ ಸಾವು-ನೋವುಗಳನ್ನು ಉಂಟು ಮಾಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಳಯ ಸ್ವರೂಪಿ ಅವಘಡಗಳಿಂದ ಮಾನವ ಮತ್ತು ಪ್ರಾಣಿ ಸಂಕುಲಕ್ಕೆ ಅಪಾಯವಿದೆ ಎಂದರು.
ಜಪಾನ್‌ನಲ್ಲಿ ಸುನಾಮಿ ಸಂಭವಿಸುವ ಬಗ್ಗೆ ಭವಿಷ್ಯ ನುಡಿದಿದ್ದೆ. ಇದೇ ಜುಲೈನಲ್ಲಿ ಜಪಾನ್‌ಗೆ ಬರುವಂತೆ ತಮ್ಮನ್ನು ಅಲ್ಲಿನ ಅಧಿಕಾರಿಗಳು ಆಹ್ವಾನಿಸಿರುವುದಾಗಿ ಸ್ವಾಮೀಜಿ ತಿಳಿಸಿದರು.
ರಾಜಕೀಯದಲ್ಲೂ ಅಸ್ಥಿರತೆ: ಕರ್ನಾಟಕದಲ್ಲಿ ಸದ್ಯ ಉಂಟಾಗಿರುವ ರಾಜಕೀಯ ಅಸ್ಥಿರತೆ ಮತ್ತೂ ಮುಂದುವರಿಯಲಿದೆ ಎಂದು ಕೋಡಿಶ್ರೀ ಈ ಸಂದರ್ಭದಲ್ಲಿ ಹೇಳಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನಿಸಿದಾಗ, ಸಿಎಂ ಇಕ್ಕಟ್ಟಿಗೆ ಸಿಲುಕುವುದು ಖಚಿತ ಎಂದರು.