ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕಾ ಚಟುವಟಿಕೆಗಳ ವಿರುದ್ಧ ತೀವ್ರ ಅಂದೋಲನ ಕೈಗೊಳ್ಳುವುದಾಗಿ ಯೋಗಗುರು ಬಾಬಾ ರಾಮದೇವ್ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ಯೋಗ ಶಿಬಿರದಲ್ಲಿ ಬಾಬಾ ರಾಮದೇವ್ ಇದನ್ನು ಸ್ಪಷ್ಟಪಡಿಸಿದ್ದು, ಜೂನ್‌ನಿಂದ ದೇಶಾದ್ಯಂತ ಚಳುವಳಿ ನಡೆಸುವುದಾಗಿ ತಿಳಿಸಿದರು.
ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು ಸಹಿತ ಹಲವು ಬೇಡಿಕೆಗಳನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಲ್ಲಿ ಇರಿಸಲಾಗಿದೆ. ಇದರ ವಿರುದ್ಧ ಜೂನ್ 1ರೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೇಶದ್ಯಾಂತ ಚಳುವಳಿ ನಡೆಸುವುದಾಗಿ ಬಾಬಾ ತಿಳಿಸಿದರು.
ವಿದೇಶದಲ್ಲಿ ಕಪ್ಪು ಹಣ ವಾಪಸ್ ತರಿಸಬೇಕಾಗಿದ್ದು, ಈ ಹಿನ್ನಲೆಯಲ್ಲಿ ವಿದೇಶದಲ್ಲಿರುವ ತಮ್ಮ ಖಾತೆಯ ಹಣವನ್ನು ರಾಜಕೀಯ ಪ್ರಮುಖರು ಘೋಷಿಸಬೇಕು. ಇಲ್ಲವಾದರೆ ಇದನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸಬೇಕು ಎಂದವರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ವಿರುದ್ಧದ ಚಳುವಳಿಗೆ ತಮ್ಮ ಪೂರ್ಣ ಬೆಂಬಲ ಇರುವುದಾಗಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.