ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ನಿವೃತ್ತಿಯ ಮಾತನ್ನಾಡಿದ್ದಾರೆ. ಆದರೆ, ಈ ಬಾರಿ ಅವರು ಸೋತರೆ, ನಾವು ಗೆದ್ದರೆ ಎಂಬಿತ್ಯಾದಿ ಸವಾಲುಗಳ ಮೂಲಕವಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ತನ್ನನ್ನು ಜನರೇ ಅನುಮಾನದಿಂದ ನೋಡುತ್ತಿದ್ದಾರೆ ಎಂಬ ಕಾರಣಕ್ಕಾಗಿ!
ಹೌದು, ಎಚ್‌ಡಿಕೆ ಈ ನೋವು ಹಂಚಿಕೊಂಡದ್ದು ಮೈಸೂರಿನಲ್ಲಿ ನಡೆದ 'ಸಾಮಾಜಿಕ ನ್ಯಾಯ ಮತ್ತು ಸುಧಾರಣೆ' ಕುರಿತ ವಿಚಾರ ಸಂಕಿರಣ ಮತ್ತು ಹಿರಿಯ ವಕೀಲರ ಸನ್ಮಾನ ಕಾರ್ಯಕ್ರಮದಲ್ಲಿ.
ಕಳೆದ ಐದಾರು ತಿಂಗಳಿಂದ ನೋಡುತ್ತಲೇ ಇದ್ದೇನೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಇಷ್ಟೊಂದು ದಾಖಲೆಗಳನ್ನು ಮುಂದಿಟ್ಟರೂ ಜನರು ಇದನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಕನಿಷ್ಠ ಪಕ್ಷ ಅವರು ಭ್ರಷ್ಟಾಚಾರ ವಿರುದ್ಧ ಬೀದಿಗಿಳಿದು ಹೋರಾಟವನ್ನೂ ಮಾಡುತ್ತಿಲ್ಲ ಎಂದ ಕುಮಾರಸ್ವಾಮಿ, ತನಗೆ ತಂದೆ ದೇವೇಗೌಡರಷ್ಟು ಮನೋಬಲ ಇಲ್ಲ. ಹೀಗಾಗಿ ಹೋರಾಟ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ. ಈಗಾಗಲೇ ಸಕ್ರಿಯ ರಾಜಕೀಯದಿಂದ ಒಂದು ಹೆಜ್ಜೆ ಹೊರಗೆ ಇಡುತ್ತಿದ್ದೇನೆ ಎಂದು ಹೇಳಿದರು.
ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ಆಕಸ್ಮಿಕವಾಗಿಯೇ ಮುಖ್ಯಮಂತ್ರಿಯಾದೆ. ವಿಧಾನಸೌಧದಲ್ಲಿ ಉಳಿದ ಮುಖ್ಯಮಂತ್ರಿಗಳ ಸಾಲಿನಲ್ಲಿ ನನ್ನ ಫೋಟೋ ಕೂಡ ಇರುತ್ತದೆ. ಸತ್ತ ಮೇಲೆ ನನ್ನ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸುತ್ತಾರೆ. ಹೀಗಾಗಿ ಬೇರಾವುದೇ ರಾಜಕೀಯ ಮಹತ್ವಾಕಾಂಕ್ಷೆಗಳು ನನಗಿಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ, ದೇವೇಗೌಡರ ಕುಟುಂಬದವರಿಗೆ ಹಿಂದಿನಿಂದಲೂ ಭ್ರಷ್ಟರು ಎಂಬ ಹಣೆ ಪಟ್ಟಿ ಕಟ್ಟುತ್ತಿರುವುದು ವಿಷಾದಕರ ಎಂದರು.