ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪೋಳ್ ಅಕ್ರಮ ಗಣಿ ಪರವಾನಗಿ ನಾನಲ್ಲ, ಕೃಷ್ಣ ನೀಡಿದ್ದು: ಸಿಎಂ (Ram rao Pol | Mine | S M Krishna | Yeddyurappa | Karnataka Mining)
ಬೆಂಗಳೂರು: ಸಿಇಸಿ ವರದಿಯಲ್ಲಿ ಉಲ್ಲೇಖಿಸಲಾಗಿರುವ ರಾಮರಾವ್ ಪೋಳ್ ಗಣಿ ಕಂಪನಿಗೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿಯನ್ನು ತಾವು ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇದಕ್ಕೆ ಅನುಮತಿ ನೀಡಿದ್ದು ಎಸ್.ಎಂ.ಕೃಷ್ಣ ಸರಕಾರ ಎಂದು ಹೇಳಿದ್ದಾರೆ.

ಜಿಲ್ಲಾ ಪ್ರವಾಸದಲ್ಲಿರುವ ಅವರು ಮೈಸೂರಿನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ತಮ್ಮ ಸರಕಾರದ ಅವಧಿಯಲ್ಲಿ ಯಾರಿಗೂ ಕೂಡ ಗಣಿಗಾರಿಕೆಗೆ ಪರವಾನಗಿ ಕೊಟ್ಟಿಲ್ಲ ಎಂದು ಪುನರುಚ್ಚರಿಸಿದ ಅವರು, ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಲೋಕಾಯುಕ್ತ ಸಂತೋಷ ಹೆಗಡೆ ಹಾಗೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೋರಾಟವನ್ನು ಶ್ಲಾಘಿಸಿದರು.

ಪೋಳ್ ಕಂಪನಿಯು ಅರಣ್ಯ ಜಮೀನಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ಇದು ಅಕ್ರಮ ಎಂದು ಸುಪ್ರೀಂ ಕೋರ್ಟ್ ರಚಿಸಿದ್ದ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿ ನೀಡಿತ್ತು.

ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಗುರುವಾರ ನ್ಯಾಯಾಲಯಕ್ಕೆ ಉತ್ತರ ನೀಡಲಾಗುತ್ತದೆ. ಎಸ್.ಎಂ.ಕೃಷ್ಣ, ಧರ್ಮ ಸಿಂಗ್, ಕುಮಾರಸ್ವಾಮಿ... ಹೀಗೆ ಯಾವೆಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲಿ ಎಷ್ಟೆಷ್ಟು ಪರವಾನಗಿಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂಬ ಕುರಿತು ಪ್ಯಾರಾ ಬೈ ಪ್ಯಾರಾ ವಿವರಣೆಯನ್ನು ಸುಪ್ರೀಂ ಕೋರ್ಟ್ ಮುಂದಿಡಲಾಗುತ್ತದೆ ಎಂದು ಸಿಎಂ ಹೇಳಿದರು.

ಅಕ್ರಮ ಗಣಿಗಾರಿಕೆ ತಡೆಗೆ ದೇಶದಲ್ಲೇ ಮೊದಲ ಬಾರಿಗೆ ಮುಂದಾಗಿದ್ದು ಬಿಜೆಪಿ ಸರಕಾರ. ಪ್ರತಿಪಕ್ಷಗಳು ಅಪಪ್ರಚಾರ ಆಂದೋಲನದಲ್ಲೇ ತೊಡಗಿವೆ ಎಂದು ಅವರು ಹೇಳಿದರು.

ಗೌಡ, ಕುಮಾರ ಇದ್ದಾರಾ ಕೇಳಿಕೊಳ್ಳಲಿ...
ಈ ರಾಜ್ಯದಲ್ಲಿ ಸರಕಾರ ಇದೆಯೇ, ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಾರಾ ಎಂದೆಲ್ಲಾ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಮೊದಲು, ದೇವೇಗೌಡ ಅಥವಾ ಕುಮಾರಸ್ವಾಮಿ ಇದ್ದಾರೆಯೇ ಅಂತ ಅವರೇ ಕೇಳಿಕೊಳ್ಳಲಿ. ನಾನು ಇದ್ದೇನೆಯೇ, ಸರಕಾರ ಇದೆಯೇ ಎಂದೆಲ್ಲಾ ಜನರೇ ತೀರ್ಮಾನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.
ಇವನ್ನೂ ಓದಿ