ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನ್ನ ಬಗ್ಗೆ ಯಾರೊಬ್ರೂ ಚಕಾರವೆತ್ತಿಲ್ಲ, ಅದೇ ಖುಷಿ: ಸಿಎಂ
(Yeddyurappa | Devendra Pradhan | BJP Dissidence | Eshwarappa | Karnataka BJP)
ನನ್ನ ಬಗ್ಗೆ ಯಾರೊಬ್ರೂ ಚಕಾರವೆತ್ತಿಲ್ಲ, ಅದೇ ಖುಷಿ: ಸಿಎಂ
ಬೆಂಗಳೂರು, ಗುರುವಾರ, 21 ಏಪ್ರಿಲ್ 2011( 18:21 IST )
ರಾಜ್ಯ ಬಿಜೆಪಿಯೊಳಗಿನ ಭಿನ್ನಮತದ ಶಮನಕ್ಕೆಂದೇ ಕೇಂದ್ರೀಯ ವೀಕ್ಷಕ ಧರ್ಮೇಂದ್ರ ಪ್ರಧಾನ್ ಆಗಮಿಸಿದ್ದು, ಅವರು ಎರಡು ದಿನಗಳ ಕಾಲ ಏನು ಮಾಡಿದರು ಎಂಬ ವಿಷಯ ಕೊನೆಗೂ ಬಯಲಾಗಲಿಲ್ಲ. ಎರಡು ದಿನಗಳ ಭೇಟಿಯ ಕೊನೆಯಲ್ಲಿ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಅಭಿವೃದ್ಧಿ ಕುರಿತು ಚರ್ಚಿಸಿದ್ದೇವೆ ಎಂದರಾದರೂ, ಪಕ್ಷದ ಆಂತರಿಕ ವಿಚಾರಗಳ ಕುರಿತು ನಡೆಸಿದ ಮಾತುಕತೆಗಳ ವಿವರ ನೀಡಲು ನಿರಾಕರಿಸಿದರು.
ಎರಡು ದಿನ ಸಮಾಲೋಚನೆಯಲ್ಲಿ, ಆಯಾ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಯಾಗಿದೆ, ಶಾಸಕರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಪಕ್ಷ ಹಾಗೂ ಸರಕಾರದ ಹೊಂದಾಣಿಕೆ ಅಗತ್ಯವಿರುವುದರಿಂದ ಈ ಸಭೆ ನಡೆಸಲಾಗಿತ್ತು ಎಂದ ಅವರು, ಪಕ್ಷದಲ್ಲಿರುವ ಆಂತರಿಕ ವಿಚಾರಗಳನ್ನು ಬಹಿರಂಗಡಪಡಿಸಲಾಗದು. ಏನೇ ಇದ್ದರೂ ಅದನ್ನು ನಮ್ಮ ನಮ್ಮಲ್ಲೇ ಪರಿಹರಿಸಿಕೊಳ್ಳುತ್ತೇವೆ ಎಂದರು.
ಆಡಳಿತ ವೈಖರಿ ಬಗ್ಗೆ ಚಕಾರವೆತ್ತಿಲ್ಲ: ಯಡಿಯೂರಪ್ಪ ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಮಾಲೋಚನೆಯ ಸಂದರ್ಭ ಯಾವೊಬ್ಬ ಶಾಸಕರೂ 3 ವರ್ಷಗಳ ನಮ್ಮ ಆಡಳಿತ ವೈಖರಿಯ ಬಗ್ಗೆ ಚಕಾರವೆತ್ತಿಲ್ಲ, ಅಥವಾ ಮುಖ್ಯಮಂತ್ರಿಯತ್ತ ಬೆಟ್ಟು ಮಾಡಿ ತೋರಿಸಿಲ್ಲ. ಒಂದೇ ಒಂದು ಶಬ್ದ ಮಾತನಾಡಿಲ್ಲ. ಇದು ಅತ್ಯಂತ ಸಂತೋಷದ ಸಂಗತಿ ಎಂದರು.
ಸಹಜವಾಗಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಕುರಿತು ಕೋರಿಕೆ ಮುಂದಿಟ್ಟಿದ್ದಾರೆ. ಇಂತಹಾ ಸಮಸ್ಯೆಗಳನ್ನು ಗಮನಕ್ಕೆ ತಂದಿರುವುದು ಸ್ವಾಭಾವಿಕ ಎಂದ ಮುಖ್ಯಮಂತ್ರಿ, ಇನ್ನು ಮುಂದೆ ಪ್ರತಿ ಜಿಲ್ಲೆಗೂ ಭೇಟಿ ನೀಡುವ ಕಾರ್ಯಕ್ರಮವಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತೇವೆ ಎಂದರು.
ಅಸಮಾಧಾನ ಶಮನವಾಗಿದೆಯೇ ಎಂದು ಹೇಳದ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಈಶ್ವರಪ್ಪ ಮಾತನಾಡಿ, ಪಕ್ಷದ ಪ್ರಜಾಪ್ರಭುತ್ವದ ಅನುಸಾರವೇ ಶಾಸಕರೊಳಗಿನ ಅಸಮಾಧಾನಗಳನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇವೆ. ಅದೇ ರೀತಿ ಶಾಸಕರೂ ತಮ್ಮ ಅಸಮಾಧಾನವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ. ಅವರಿಗೆ ಒಳ್ಳೆಯ ಭರವಸೆ ಸಿಕ್ಕಿದೆ. ಈಗ ಎಲ್ಲ ಶಾಸಕರೂ ತೃಪ್ತರಾಗಿದ್ದಾರೆ ಎಂದರು.
ಆದರೆ, ಈಗ ಬಿಜೆಪಿಯೊಳಗಿನ ಅಸಮಾಧಾನ ಎಲ್ಲವೂ ಶಮನಗೊಂಡಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಅವರು ನುಣುಚಿಕೊಂಡರು.
28ಕ್ಕೆ ರಾಜ್ಯಕ್ಕೆ ಆಡ್ವಾಣಿ, ಬಿಜೆಪಿ ಹೊಸ ಕೇಂದ್ರ ಕಚೇರಿ ಉದ್ಘಾಟನೆ ಇದೇ ವೇಳೆ, ಏಪ್ರಿಲ್ 28ರಂದು ಮಾಜಿ ಉಪಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಮಲ್ಲೇಶ್ವರದಲ್ಲಿ ಬಿಜೆಪಿಯ ಹೊಸ ಕೇಂದ್ರ ಕಚೇರಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ಈಶ್ವರಪ್ಪ ಘೋಷಿಸಿದರು.