ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಯನ್ನು ತಡೆಗಟ್ಟಲು ಸಿಇಸಿ ಮಾಡಿರುವ ಶಿಫಾರಸನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ತಿಳಿಸಿದೆ.
ಇದರಂತೆ ಬಳ್ಳಾರಿ ಜಿಲ್ಲೆ ಸಂಡೂರು ರಾಮಗಡ ಮತ್ತು ಸ್ವಾಮಿಮಲೆ ಅರಣ್ಯ ಪ್ರದೇಶದಲ್ಲಿ ಆರು ಕಂಪೆನಿಗಳ ಗಣಿಗಾರಿಕೆಯನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಅಕ್ರಣ ಗಣಿಗಾರಿಕೆ ನಿರ್ಮೂಲನೆ ಮಾಡಲು ಸಿಇಸಿ ಮಾಡಿರುವ ಶಿಫಾರಸುಗಳನ್ನು ಒಪ್ಪಿಕೊಳ್ಳುವುದದಾಗಿ ತಿಳಿಸಿರುವ ರಾಜ್ಯ ಸರಕಾರ, ಈ ಸಂಬಂಧ ಅಗತ್ಯ ಕ್ರಮಕ್ಕೆ ಮುಂದಾಗಿದೆ ಎಂದಿದೆ.
ಸಿಇಸಿ ಸಲ್ಲಿಸಿದ್ದ ಮಧ್ಯಂತರ ವರದಿ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಎಪ್ರಿಲ್ 15ರಂದು ರಾಜ್ಯ ಸರಕಾರಕ್ಕೆ ಉತ್ತರ ನೀಡುವಂತೆ ನೋಟಿಸ್ ನೀಡಿತ್ತು. ಲೋಕಾಯುಕ್ತರು ಈ ಬಗ್ಗೆ ವರದಿ ನೀಡಿದ್ದರೂ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ ಎಂದು ಉಲ್ಲೇಖಿಸಿತ್ತು. ಇದರಂತೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದೆ.
ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸಲು ಸರ್ಕಾರ ಬದ್ಧವಾಗಿದೆ. ಜತೆಗೆ ಸಿಇಸಿ ಮಾಡಿರುವ ಶಿಫಾರಸುಗಳನ್ನೂ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮಕ್ಕೆ ಸರಕಾರ ಮುಂದಾಗಲಿದೆ. ಲೋಕಾಯುಕ್ತ ನಡೆಸಿದ ತನಿಖೆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಒತ್ತುವರಿ ಮಾಡಿದ 99 ಪ್ರಕರಣಗಳಲ್ಲಿ ಶಿಸ್ತು ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.