ಕಾಂಗ್ರೆಸ್ ಮುಖಂಡರಿಂದ ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಲ್ಲಿರುವ ನಾಗರಿಕರ ಪರ ಸದಸ್ಯರ ತೇಜೋವಧೆ ಆಂದೋಲನವು ಮುಂದುವರಿಯುತ್ತಿರುವಂತೆಯೇ, ಕೇಂದ್ರದ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಸಮಿತಿ ಸದಸ್ಯರಿಗೇ ಮೌನವಾಗಿರುವಂತೆ ಸಲಹೆ ನೀಡಿದ್ದಾರೆ!
ಹೌದು, ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಕಾಂಗ್ರೆಸ್ ಮುಖಂಡ ಮೊಯಿಲಿ, ಲೋಕಪಾಲ ಸಮಿತಿ ಸದಸ್ಯರು ಅನಗತ್ಯ ಹೇಳಿಕೆಗಳನ್ನು ನೀಡಬಾರದು. ವೈಯಕ್ತಿಕ ಭಾವನೆಗಳನ್ನು ಹೊರಗೆಡಹುವುದು ತರವಲ್ಲ ಎಂದು ಸಲಹೆ ನೀಡಿದರಲ್ಲದೆ, ಹೇಳಿಕೆ, ಪ್ರತಿಹೇಳಿಕೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ, ಹೀಗಾಗಿ ಸದಸ್ಯರು ಕರಡು ರಚನಾ ಸಮಿತಿಯ ಮುಂದಿನ ಸಭೆಯವರೆಗೆ ಮೌನವಾಗಿರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಕಾಂಗ್ರೆಸ್‌ನ ಮನೀಷ್ ತಿವಾರಿ, ದಿಗ್ವಿಜಯ್ ಸಿಂಗ್ ಮುಂತಾದವರು ಲೋಕಪಾಲ ಸಮಿತಿಯ ನಾಗರಿಕ ಸದಸ್ಯರ ಮೇಲೆ ಕೆಂಡ ಕಾರುತ್ತಾ ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನ್ಯಾಯಾಧೀಶರ ಪಾರದರ್ಶಕತೆಗೂ ಮಸೂದೆ ಯಾವುದೇ ಅಡ್ಡಿ ಬಂದರೂ ಲೋಕಪಾಲ ಮಸೂದೆ ಸಂಸತ್ತಿನ ಈ ಮುಂಗಾರು ಅಧಿವೇಶನದಲ್ಲಿ ಜಾರಿಯಾಗುತ್ತದೆ ಎಂದ ಮೊಯಿಲಿ, ನ್ಯಾಯಾಧೀಶರ ಭ್ರಷ್ಟಾಚಾರಗಳೂ ಇತ್ತೀಚೆಗೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಪಾರದರ್ಶಕತೆಗೂ ಹೊಸ ಮಸೂದೆಯೊಂದು ಸಿದ್ಧವಾಗುತ್ತಿದ್ದು, ಮೂರು ತಿಂಗಳೊಳಗೆ ಜಾರಿಗೊಳಿಸುವುದಾಗಿ ಹೇಳಿದರು.