ರೈತರಿಗೆ ಕಂಟಕವಾಗಿರುವ ಹೆಮ್ಮಾರಿ ಎಂಡೋಸಲ್ಫಾನ್ ಕ್ರಿಮಿನಾಶಕವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ಬೆಂಗಳೂರಿಗೆ ತೆರಳಿದ ಕೂಡಲೇ ಸರಕಾರಿ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.
ಶನಿವಾರ ಜಿಲ್ಲೆಯ ರಾಮದುರ್ಗ ತಾಲೂಕಿನ ರಂಕಲಕೊಪ್ಪ ಗ್ರಾಮದಲ್ಲಿ ಆಸರೆ ಮನೆಗಳ ಹಕ್ಕು ಪತ್ರ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಂಡೋಸಲ್ಫಾನ್ ನಿಷೇಧ ಕುರಿತಂತೆ ಸರಕಾರಿ ಆದೇಶ ಹೊರಡಿಸಿ ರಾಜ್ಯದ ರೈತರ ಹಿತ ಕಾಯುವೆ ಎಂದು ಭರವಸೆ ನೀಡಿದರು.
ಎಂಡೋಸಲ್ಫಾನ್ ಮಾರಾಟಗಾರರ ಮೇಲೆ ಈ ನಿಷೇಧದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ದೇಶಕ್ಕೆ ಕಂಟಕಪ್ರಾಯವಾಗಿರುವ ಎಂಡೋಸಲ್ಫಾನ್ ಸಂಪೂರ್ಣವಾಗಿ ದೇಶಾದ್ಯಂತ ನಿಷೇಧಗೊಳಿಸಬೇಕೆಂದು ತಾವು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸುವುದಾಗಿ ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಪ್ರಧಾನಿ ಕಾರ್ಯಪ್ರವೃತ್ತರಾಗಬೇಕೆಂದು ಮನವಿ ಮಾಡಿದರು.