ಜೆಡಿಎಸ್ ಪಕ್ಷ ಆಯೋಜಿಸುವ ಸಮಾವೇಶಗಳಿಗೆ ಜನ ಸೇರುವುದಿಲ್ಲ ಎಂಬ ಕಾರಣಕ್ಕೆ ಎಚ್.ಡಿ.ದೇವೇಗೌಡ ಅವರು ಪಕ್ಷಾತೀತ ಸಮಾವೇಶ ಮಾಡುವ ಮಾತುಗಳನ್ನಾಡುತ್ತಿದ್ದಾರೆ. ಇವರು ಹೋರಾಟ ಮಾಡಿದಷ್ಟೂ ಬಿಜೆಪಿ ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಆರಂಭಿಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಭಾನುವಾರ ಹೇಳಿಕೆ ನೀಡಿದ್ದರು.
ಗೃಹಕಚೇರಿ ಕೃಷ್ಣಾದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮೆಂತ್ರಿಗಳು, ಸೋನಿಯಾಗಾಂಧಿ ಅವರು ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಿ ಎಂದು ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ ಬೆನ್ನಲ್ಲೇ ದೇವೇಗೌಡರು ಮೇ 6ರಿಂದ ಜನಾಂದೋಲನ ನಡೆಸುವ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ವಾಗ್ದಾಳಿ ನಡೆಸಿದರು.
ಎರಡೂ ಪಕ್ಷಗಳಿಗೂ ಸರಕಾರದ ವಿರುದ್ಧ ಹೋರಾಟ ನಡೆಸಿ ಸುಸ್ತಾಗಿದೆ. ಇವರ ನಿಜ ಬಣ್ಣ ಜನರಿಗೆ ಗೊತ್ತಿದೆ. ಹೋರಾಟಗಳಿಂದ ಅವರಿಗೆ ಯಾವುದೇ ಲಾಭ ಆಗಿಲ್ಲ. ಅವರಿಗೆ ರಾಜ್ಯದಲ್ಲಿ ವಿಳಾಸವೇ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ಗಣಿಗಾರಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಡೆಸಿರುವ ಅವ್ಯವಹಾರದ ಬಗ್ಗೆ ಸದ್ಯದಲ್ಲಿಯೇ ನವದೆಹಲಿಗೆ ತೆರಳಿ ಆರೋಪಪಟ್ಟಿ ಬಿಡುಗಡೆ ಮಾಡುವುದಾಗಿ ಪುನರುಚ್ಚರಿಸಿದರು.