ಕುಖ್ಯಾತ ರೌಡಿ ಅಕ್ರಂ ಬುಧವಾರ ಬೆಳಗಿನ ಜಾವ ಸಿಸಿಬಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಘಟನೆ ಪೀಣ್ಯದ ಎಚ್‌ಎಂಟಿ ಲೇಔಟ್‌ನಲ್ಲಿ ನಡೆದಿದೆ.
1990ರಲ್ಲಿ ಪಾತಕ ಲೋಕಕ್ಕೆ ಕಾಲಿಟ್ಟ ಶಿವಮೊಗ್ಗ ಭದ್ರಾವತಿಯ ಅಕ್ರಂ ಕಳೆದ ತಿಂಗಳು ಪೊಲೀಸ್ ಮಾಹಿತಿದಾರರೊಬ್ಬರನ್ನು ಮೂಡಲಪಾಳ್ಯದಲ್ಲಿ ಹತ್ಯೆಗೈದಿದ್ದ. ಇಂದು ಬೆಳಿಗ್ಗೆ ನಂದಿನಿ ಲೇಔಟ್‌ನಿಂದ ಕಾರಿನಲ್ಲಿ ಹೊರಟಿದ್ದ ಅಕ್ರಂ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಅವನ ಬೆಂಬತ್ತಿದ್ದರು.
ಈ ಸಂದರ್ಭದಲ್ಲಿ ಆತನ ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು ಶರಣಾಗುವಂತೆ ಸೂಚಿಸಿದಾಗ, ಅಕ್ರಂ ಪೊಲೀಸರ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದ ಪರಿಣಾಮ ಅಕ್ರಂ ಸಾವನ್ನಪ್ಪಿರುವುದಾಗಿ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.
ಪುರಾತನ ಪಾತಕಿ ಅಕ್ರಂ ಕಾರಿನಲ್ಲಿ ಲಾಂಗ್, ಪಾಸ್ ಬುಕ್ ಪತ್ತೆಯಾಗಿದ್ದು ಅದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಿರ್ಜಿ ಹೇಳಿದ್ದಾರೆ. ಅಕ್ರಂ ಇತ್ತೀಚೆಗೆ ನಂಜುಂಡಪ್ಪ ಎಂಬವರನ್ನು ಕೂಡ ಹತ್ಯೆಗೈದಿದ್ದ. ಕೆಂಗೇರಿಯಲ್ಲಿ ಧನರಾಜ್ ಎಂಬವರ ಮೇಲೆ ಶೂಟೌಟ್ ಸೇರಿದಂತೆ ಆತನ ಮೇಲೆ ಸುಮಾರು 32 ಪ್ರಕರಣ ದಾಖಲಾಗಿದ್ದವು.