ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಮಂಜುನಾಥ'ನ ಮುಂದೆ ಸ್ಫೋಟಕ ಸತ್ಯ ಬಿಚ್ಚಿಡ್ತೇನೆ: ಎಚ್‌ಡಿಕೆ (Dharmasthala | JDS | Kumaraswamy | BJP | Congress | Deve gowda | Yeddyurappa)
'ಮಂಜುನಾಥ'ನ ಮುಂದೆ ಸ್ಫೋಟಕ ಸತ್ಯ ಬಿಚ್ಚಿಡ್ತೇನೆ: ಎಚ್‌ಡಿಕೆ
ಬೆಂಗಳೂರು, ಗುರುವಾರ, 5 ಮೇ 2011( 11:18 IST )
ಆಡಳಿತಾರೂಢ ಬಿಜೆಪಿ ಸರಕಾರದ ಕರ್ಮಕಾಂಡವನ್ನು ಜನರ ಮುಂದೆ ಇಡುವ ನಿಟ್ಟಿನಲ್ಲಿ ಈ ಹೋರಾಟದ ರೂಪುರೇಷೆಯನ್ನು 15 ದಿನಗಳೊಳಗೆ ಪ್ರಕಟಿಸುತ್ತೇನೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಧರ್ಮಸ್ಥಳದ ಮಂಜುನಾಥನ ಮುಂದೆ ಸ್ಫೋಟಕ ಸತ್ಯ ಬಹಿರಂಗ ಮಾಡುವ ಮೂಲಕ ಈ ಆಂದೋಲನ ಆರಂಭಿಸುವುದಾಗಿ ಘೋಷಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದಾಗ ರಾಜ್ಯದ ಪ್ರಜ್ಞಾವಂತರು ಸ್ವಾತಂತ್ರ್ಯ ಉದ್ಯಾನದಲ್ಲಿ ಕ್ಯಾಂಡಲ್ ಹಿಡಿದು ಬೆಂಬಲ ಸೂಚಿಸಿದ್ದರು. ಆದರೆ ನಾವು ಭ್ರಷ್ಟಾಚಾರದ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ ಎಂದರೆ ಬುದ್ದಿಜೀವಿಗಳು, ಸಾಹಿತಿಗಳು, ಕಲಾವಿದರು ಬೆಂಬಲ ಸೂಚಿಸುವುದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣ ಹೆಸರಿನಲ್ಲಿ ಸುಮಾರು 13 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. 2010-11ನೇ ಸಾಲಿನ ಆಯವ್ಯಯದಲ್ಲಿ 9 ಜಿಲ್ಲೆಗಳ ಒಟ್ಟು 100 ರೈತ ಸಂಪರ್ಕ ಕೇಂದ್ರ ನಿರ್ಮಿಸಲು 25 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಈ ಹಣದಲ್ಲಿ ಈಗಾಗಲೇ 13 ಕೋಟಿ ರೂ. ಬಿಡುಗಡೆ ಆಗಿದ್ದರೂ ಎಲ್ಲೂ ಕಟ್ಟಡಗಳ ನಿರ್ಮಾಣ ಆಗಿಲ್ಲ. ಜನತೆಯ ಈ ಹಣ ಏನಾಗಿದೆ ಎಂದು ಪ್ರಶ್ನಿಸಿದರು.
ನಮ್ಮ ಕುಟುಂಬದ ಮನೆ ಮೇಲೆ ದಾಳಿ ನಡೆಸಲಿ: ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಅವ್ಯವಹಾರಗಳ ಕಡತಗಳು ನಾಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ಗೌಡರ ಮನೆಗೆ ಸಾಗಿಸಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಹೀಗಾಗಿ ನನ್ನ, ಗೌಡರ ಹಾಗೂ ಕುಟುಂಬದ ಮನೆಗಳ ಮೇಲೆ ಯಡಿಯೂರಪ್ಪ ಅವರೇ ಖುದ್ದು ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಮೇ 6ರಿಂದ ಹಮ್ಮಿಕೊಂಡಿರುವ ಪಕ್ಷಾತೀತ ಜನಾಂದೋಲನ ಮೇ 9ರಂದು ಶಿವಮೊಗ್ಗದಲ್ಲಿ ಮುಕ್ತಾಯವಾಗಲಿದೆ. ಈ ಸಂದರ್ಭದಲ್ಲಿ ಸರಕಾರದ ಎಲ್ಲಾ ಭ್ರಷ್ಟಾಚಾರವನ್ನು ಬಯಲು ಮಾಡುವುದಾಗಿ ತಿಳಿಸಿದರು.