ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಆರೋಪ ಸಾಬೀತು ಮಾಡಿದ್ರೆ ನೇಣಿಗೇರುವೆ: ಎಚ್‌ಡಿಕೆ (Kumaraswamy | JDS | BJP | Deve gowda | Yeddyurappa | Congress)
ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಡುವಿನ ವಾಕ್ಸಮರ ಮುಂದುವರಿದಿದ್ದು, ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ದೇವೇಗೌಡರು ಮತ್ತು ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದನ್ನು ಸಾಬೀತು ಪಡಿಸಿದರೆ, ನಾನು ಸಾರ್ವಜನಿಕವಾಗಿ ನೇಣಿಗೆ ಶರಣಾಗುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಭಾನುವಾರ ಜನಾಂದೋಲನ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಪಕ್ಷಗಳು ಆರೋಪ ಮಾಡಿದರೆ ಆಡಳಿತಾರೂಢ ಪಕ್ಷ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಆದರೆ ಮುಖ್ಯಮಂತ್ರಿಗಳು ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮೇಲೆಯೂ ಲೋಕಾಯುಕ್ತ ಪ್ರಕರಣ ಇದೆ. ಮುಖ್ಯಮಂತ್ರಿ ವಿರುದ್ಧವೂ ಇದೆ. ಆದರೆ ಯಡಿಯೂರಪ್ಪ ತಮ್ಮ ಮಕ್ಕಳ ಮೂಲಕ ತನಿಖೆಗೆ ತಡೆಯಾಜ್ಞೆ ತಂದಿದ್ದಾರೆ. ಅವರು ಪ್ರಾಮಾಣಿಕರೇ ಆಗಿದ್ದರೆ ತನಿಖೆಗೆ ತಡೆಯಾಜ್ಞೆ ಯಾಕೆ ತರಬೇಕಿತ್ತು ಎಂದು ಪ್ರಶ್ನಿಸಿದರು.

ನಮ್ಮ ಕುಟುಂಬದ ವಿರುದ್ಧವೂ ಸಾಕಷ್ಟು ಆರೋಪ ಇದೆ. ಪ್ರಕರಣ ದಾಖಲಾಗಿದೆ. ಆದರೆ ನಾವು ತಡೆಯಾಜ್ಞೆ ತಂದಿಲ್ಲ. ನಮ್ಮ ಕುಟುಂಬದ ಬಗ್ಗೆ ತನಿಖೆ ನಡೆಸಲು ಅವರಿಗೆ ಮುಕ್ತ ಅವಕಾಶ ಇದೆ. ಅವೆಲ್ಲ ಬಿಟ್ಟು ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಲು ಸರಕಾರದ ವೇತನ ನೀಡಿ, ಒಬ್ಬರನ್ನು ನೇಮಕ ಮಾಡಿ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಿದ್ದಾರೆ. ಇದಕ್ಕೆಲ್ಲ ನಾನು ಜಗ್ಗುವುದಿಲ್ಲ. ಸರಕಾರ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಇವನ್ನೂ ಓದಿ