ಭ್ರಷ್ಟಾಚಾರದ ವಿರುದ್ಧ ಭ್ರಷ್ಟರಿಂದ್ಲೇ ಹೋರಾಟ: ಚಂಪಾ ವ್ಯಂಗ್ಯ
ಬೆಂಗಳೂರು, ಮಂಗಳವಾರ, 10 ಮೇ 2011( 12:27 IST )
ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನು ಜನ ಕೈಗೆತ್ತಿಕೊಳ್ಳಬೇಕೇ ಹೊರತು ಭ್ರಷ್ಟರಲ್ಲ ಎಂದು ಪ್ರತಿಪಕ್ಷಗಳ ಹೋರಾಟವನ್ನು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಟೀಕಿಸಿದ್ದಾರೆ.
ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಅ.ನ.ಕೃಷ್ಣರಾಯರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ನಡೆಸುತ್ತಿರುವ ಬಗ್ಗೆ ಚಂಪಾ ಪರೋಕ್ಷವಾಗಿ ಈ ರೀತಿ ವಾಗ್ದಾಳಿ ನಡೆಸಿದರು.
ಜನಲೋಕಪಾಲ ಮಸೂದೆ ಜಾರಿಗೆ ದೇಶವ್ಯಾಪಿ ಆಗ್ರಹ ವ್ಯಕ್ತವಾದ ನಂತರ ಎಲ್ಲ ಕಡೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭವಾಗಿದೆ. ಇಂತಹ ಆಂದೋಲನಗಳಲ್ಲಿ ಜನ ಭಾಗವಹಿಸಬೇಕು. ವಿಪರ್ಯಾಸ ಎಂದರೆ, ಜನರು ಯಾರ ವಿರುದ್ಧ ಹೋರಾಟ ಆರಂಭಿಸಿದ್ದರೋ ಅವರೇ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಹೋರಾಟಗಾರರು ಗೊಂದಲಕ್ಕೀಡುಗುತ್ತಿದ್ದಾರೆ ಎಂದರು.
ಭ್ರಷ್ಟರು ಜನಾಂದೋಲನಗಳಲ್ಲಿ ಭಾಗವಹಿಸುವ ಮೂಲಕ ಚಳವಳಿಯ ಶಕ್ತಿ ಕುಂದಿಸುತ್ತಿದ್ದಾರೆ. ಭ್ರಷ್ಟರ ಈ ನಾಟಕ ಹೆಚ್ಚು ದಿನ ನಡೆಯದು. ನಿಧಾನವಾಗಿಯಾದರೂ ಜನ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು ಹೇಳಿದರು.