ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವಿನ ವಾಕ್ಸಮರ ಮುಂದುವರಿದಿದ್ದು, ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಅಪ್ಪನಾದರೆ, ಜೆಡಿಎಸ್ ಅಮ್ಮ. ಅಷ್ಟೇ ಅಲ್ಲ ಬಿಜೆಪಿ ಅಧಿಕಾರಕ್ಕೆ ಬಂದ ಮೂರು ವರ್ಷ ಕಳೆದರೂ ಒಂದೇ ಒಂದು ಹಗರಣ ನಡೆದಿಲ್ಲ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ನುಡಿದಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಕುಷ್ಠರೋಗ ಆಸ್ಪತ್ರೆ ಜಾಗವನ್ನು ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರಿಗೆ ಮಂಜೂರು ಮಾಡಿದ್ದರು. ಈಗ ಅಲ್ಲಿ ಬೃಹತ್ ಮಾಲ್ ಮತ್ತು ವಾಣಿಜ್ಯ ಕಟ್ಟಡ ತಲೆ ಎತ್ತಿದೆ. ಇದು ಭ್ರಷ್ಟಾಚಾರವಲ್ಲವೇ ಎಂದು ಪ್ರಶ್ನಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಡದಿಯ ಕೇತಗಾನಹಳ್ಳಿಯಲ್ಲಿ ನೂರು ಎಕರೆ ಜಮೀನು, ಕೆಂಗೇರಿಯ ದೇವರಗೆರೆಯಲ್ಲಿ ಅವರ ಸಹೋದರ ಬಾಲಕೃಷ್ಣೇಗೌಡರ ಪತ್ನಿ ಕವಿತಾ 200 ಎಕರೆ ಜಮೀನು ಖರೀದಿಸಿದ್ದರು. ಶ್ರೀರಂಗಪಟ್ಟಣದ ಬ್ರಹ್ಮಣಿಪುರದಲ್ಲಿ 100 ಎಕರೆ ಜಮೀನು ಖರೀದಿ ಮಾಡಿದ್ದರು. ಬಾಲಕೃಷ್ಣೇಗೌಡರು ಸರಕಾರಿ ಅಧಿಕಾರಿಯಾಗಿದ್ದರು. ಆದರೆ,ಇಷ್ಟೆಲ್ಲಾ ಜಮೀನು ಖರೀದಿಸಲು ಹಣ ಎಲ್ಲಿಂದ ಬಂತು ಎಂದು ಆರೋಪಿಸಿದರು.
ಆ ನಿಟ್ಟಿನಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯಾವುದೇ ನೈತಿಕ ಹಕ್ಕು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗಿಲ್ಲ ಎಂದ ರೇಣುಕಾಚಾರ್ಯ, ಬಿಜೆಪಿ ಸರಕಾರ ಮೂರು ವರ್ಷದ ಅವಧಿಯಲ್ಲಿ ಒಂದೇ ಒಂದು ಹಗರಣ ನಡೆಸಿಲ್ಲ ಎಂದು ಸಮಜಾಯಿಷಿ ನೀಡಿದರು.