ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಉಪಚುನಾವಣೆಯಲ್ಲಿ ಜನರೇ ಉತ್ತರ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಗಾರಪೇಟೆ, ಜಗಳೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೂ ಹಾಗೂ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇನ್ನು ಮುಂದಾದರೂ ವಿಪಕ್ಷಗಳು ಗಲಾಟೆ ಚಾಳಿ ನಿಲ್ಲಿಸಿ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿ ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ಪ್ರತಿಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು. ಹಾಗಾಗಿ ಬಿಜೆಪಿ ವಿರುದ್ಧ ಅನಾವಶ್ಯಕವಾಗಿ ಆರೋಪ ಹೊರಿಸುವುದನ್ನು ನಿಲ್ಲಿಸಲಿ ಎಂದು ತಿಳಿಸಿದರು.
ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಮುಂದಿನ ಆಡಳಿತಕ್ಕೆ ಮತ್ತಷ್ಟು ಅನುಕೂಲವಾಗಿದೆ. ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ ಅವರು ಜನರು ಪಕ್ಷದ ಮೇಲೆ ಇಟ್ಟ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.