ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಿನ್ನ ಶಾಸಕರಿಗೆ ತೃಪ್ತಿ-ಮತ್ತೆ ರೆಸಾರ್ಟ್‌ಗೆ ಹೋಗ್ತೇವೆ: ಬೇಳೂರು (disqualification | BJP MLAs | Karnataka | Supreme Court | SC revokes)
'ನಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿದೆ. ಆದರೆ ನಮ್ಮ ಮುಂದಿನ ನಿರ್ಧಾರದ ಬಗ್ಗೆ 16 ಮಂದಿ ಶಾಸಕರು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತೇವೆ. ಅದಕ್ಕಾಗಿ ನಾವು ಗೋವಾ ಅಥವಾ ಮುಂಬೈ ರೆಸಾರ್ಟ್‌ನತ್ತ ತೆರಳುತ್ತಿರುವುದಾಗಿ' ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಐವರು ಪಕ್ಷೇತರರು ಹಾಗೂ 11 ಬಿಜೆಪಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಆದೇಶವನ್ನು ಶುಕ್ರವಾರ ಸುಪ್ರೀಂಕೋರ್ಟ್ ರದ್ದುಪಡಿಸಿ ಮಹತ್ವದ ಆದೇಶ ನೀಡಿರುವ ಬಗ್ಗೆ ಬೇಳೂರು ಈ ಪ್ರತಿಕ್ರಿಯೆ ನೀಡಿದರು.

ನಮ್ಮನ್ನು ಸ್ಮಶಾನಕ್ಕೆ ಹೋದ ಶವ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದರು. ಇದೀಗ ಸ್ಮಶಾನಕ್ಕೆ ಹೋದ ಶವ ಎದ್ದು ಬಂದಿದೆ. ಈಗ ನಾವು ಅವರಿಗೆ ಸೂಕ್ತ ದಾರಿ ತೋರಿಸುತ್ತೇವೆ ಎಂದು ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

ನಾವು ಯಾವುದೇ ತಪ್ಪು ಮಾಡದ್ದಿದ್ದರೂ ಕೂಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇವೆ ಎಂದು ದೂರಿ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದರು. ಆದರೆ ಸುಪ್ರೀಂಕೋರ್ಟ್ ನಮಗೆ ನ್ಯಾಯ ಒದಗಿಸಿದೆ. ನಾವು ಎಂದೂ ಪಕ್ಷದ ವಿರುದ್ಧ ಮಾತನಾಡಿಲ್ಲ, ವ್ಯಕ್ತಿಯ ವಿರುದ್ದವಷ್ಟೇ ಮಾತನಾಡಿದ್ದೇವು ಎಂದರು.

ಐವರು ಪಕ್ಷೇತರರು ಹಾಗೂ 11 ಮಂದಿ ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದೇವೆ. ನಾವೆಲ್ಲ ಇಂದು ಸಂಜೆ 5 ಗಂಟೆಗೆ ಗೋವಾ ಅಥವಾ ಮುಂಬೈ ರೆಸಾರ್ಟ್‌ನಲ್ಲಿ ಕುಳಿತು ಮುಂದಿನ ನಮ್ಮ ನಿರ್ಧಾರದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ವಿರೋಧಿ ಅಂತ ಹಣೆಪಟ್ಟಿ ಕಟ್ಟಬೇಡಿ-ಜಾರಕಿಹೊಳಿ
ನಾವು ಬಿಜೆಪಿ ವಿರೋಧಿ ಅಂತ ಹಣೆಪಟ್ಟಿ ಕಟ್ಟಬೇಡಿ, ನಾವು ಮೊದಲಿನಿಂದಲೂ ನಾಯಕತ್ವದ ಬಗ್ಗೆ ಮಾತ್ರ ಅಪಸ್ವರ ಎತ್ತಿದ್ದೇವೆ. ಆದರೂ ನ್ಯಾಯದೇವತೆ ನಮ್ಮ ಪರವಾಗಿ ಬಂದಿದೆ. ನಾವು 16 ಮಂದಿ ಒಟ್ಟಿಗೆ ಸೇರಿ ಒಂದು ನಿರ್ಧಾರ ಕೈಗೊಳ್ಳುತ್ತೇವೆ. ಬಿಜೆಪಿ ಹೈಕಮಾಂಡ್ ಹತ್ತಿರ ಹೋಗಬೇಕೋ ಅಥವಾ ಯಡಿಯೂರಪ್ಪ ಜತೆ ಮಾತನಾಡಬೇಕೋ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಆದರೆ ಬಿಜೆಪಿಗೆ ಬೆಂಬಲ ನೀಡುತ್ತೀರೋ ಅಥವಾ ನಾಯಕತ್ವ ಬದಲಾವಣೆಗೆ ಮತ್ತೆ ಪಟ್ಟು ಹಿಡಿಯುತ್ತೀರೋ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡದೆ ಜಾರಿಕೊಂಡರು.
ಇವನ್ನೂ ಓದಿ