ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಯಿಂದ ರಾಜಿ ಯತ್ನ: ಮರಳಿ ಕಣಕ್ಕೆ ಧುಮುಕಿದ ಎಚ್‌ಡಿಕೆ! (BJP Disqualified MLA | HD Kumara Swamy | Karnataka Crisis | BJP | Yeddyurappa)
WD
ಅನರ್ಹ ಬಿಜೆಪಿ ಶಾಸಕರ ಮನವೊಲಿಕೆಗೆ ಒಂದೆಡೆಯಿಂದ ಬಿಜೆಪಿ ಕಸರತ್ತು ಆರಂಭಿಸಿದಾಕ್ಷಣವೇ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಉರುಳಿಸುವ ತಂತ್ರಗಾರಿಕೆ ನಡೆಸಿದ್ದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ಇದೀಗ ಮರಳಿ ಕಣಕ್ಕೆ ಧುಮುಕಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಐವರು ಪಕ್ಷೇತರರು ಹಾಗೂ 11 ಮಂದಿ ಬಿಜೆಪಿ ಭಿನ್ನಮತೀಯ ಶಾಸಕರು ಅನರ್ಹಗೊಂಡ ಬಳಿಕ ಅವರಿಂದ ದೂರವಾದಂತಿದ್ದ ಕುಮಾರಸ್ವಾಮಿ, ಇದೀಗ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ, ಅವರೂ ಅರ್ಹರು ಎಂದು ಘೋಷಿಸಿದಾಕ್ಷಣವೇ, 16 ಶಾಸಕರಿರುವ ದೆಹಲಿಗೆ ದೌಡಾಯಿಸಿದ್ದಾರೆ ಕುಮಾರಸ್ವಾಮಿ.

ಕಳೆದ ವರ್ಷವೂ ರೆಸಾರ್ಟ್‌ಗಳಿಗೆಲ್ಲಾ ಹೋಗಿ, 'ನಿಮ್ಮೊಂದಿಗೆ ನಾವಿದ್ದೇವೆ, ಸರಕಾರ ಉರುಳಿಸಿ' ಅಂತೆಲ್ಲಾ ಹುರಿದುಂಬಿಸಿದ್ದ ಕುಮಾರಸ್ವಾಮಿಗೆ ಈ ಬಾರಿಯೂ ಸಂಸದ ಚೆಲುವರಾಯ ಸ್ವಾಮಿ ಸಾಥ್ ನೀಡಿದ್ದಾರೆ. ಅವರಿಬ್ಬರೂ ಇಂದು ದೆಹಲಿಗೆ ಹೊರಟು ನಿಂತಿದ್ದಾರೆ.

ಬಿಜೆಪಿಗೆ ಬೇಕಿರುವುದು ಎರಡ್ಮೂರು ಶಾಸಕರು...
ಬಿಜೆಪಿ ಸರಕಾರಕ್ಕೆ ತತ್‌ಕ್ಷಣದ ಗಂಡಾಂತರವೇನೂ ಇಲ್ಲ. ಯಾಕೆಂದರೆ, ನಾವು ಬಿಜೆಪಿಯಲ್ಲೇ ಇದ್ದೇವೆ ಎಂದು ಈಗಾಗಲೇ 11 ಮಂದಿ ಭಿನ್ನ ಶಾಸಕರು ಹೇಳಿಕೊಂಡಿದ್ದಾರೆ. ಆದರೂ, ಈಗ ಅವರೂ ಮರಳಿರುವುದರಿಂದ ಸದನದಲ್ಲಿ ಬಹುಮತಕ್ಕೆ ಬೇಕಾಗಿರುವುದು 112. ಬಿಜೆಪಿ ಕೈಯಲ್ಲೀಗ 108, ಸ್ಪೀಕರ್ ಮತ 1 ಹಾಗೂ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸೇರಿದರೆ 110 ಮಂದಿ ಆಗುತ್ತದೆ. ಹೀಗಾಗಿ ಎರಡ್ಮೂರು ಶಾಸಕರು ಸಿಕ್ಕಿದರೆ ಸಾಕಾಗುತ್ತದೆ.

ಬಿಜೆಪಿಯಿಂದ ರಾಜಿ ಸೂತ್ರ...
ಇದಕ್ಕೆ ಕಾರಣವೆಂದರೆ, ಬಿಜೆಪಿ ನಾಯಕತ್ವವು ಆರಂಭಿಸಿರುವ ರಾಜೀ ಸೂತ್ರ. ಈ ಭಿನ್ನಮತೀಯ ಶಾಸಕರನ್ನು ಮತ್ತೆ ಪಕ್ಷದ ತೆಕ್ಕೆಗೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ, ಅವರಿಗೆ ಮಂತ್ರಿಗಿರಿ ಅಥವಾ ನಿಗಮ-ಮಂಡಳಿಗಳ ಅಧ್ಯಕ್ಷಗಿರಿಯನ್ನೆಲ್ಲಾ ಕೊಡಿಸುವ ಭರವಸೆಯೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಯಭಾರಿಯಾಗಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಉಮೇಶ್ ಕತ್ತಿ ಅವರು ನಿನ್ನೆ ರಾತ್ರಿಯೇ ದೆಹಲಿಗೆ ತಲುಪಿದ್ದಾರೆ. ಅವರನ್ನು ಇಂದು ಸಚಿವ ರೇಣುಕಾಚಾರ್ಯ ಕೂಡ ಸೇರಿಕೊಳ್ಳಲಿದ್ದಾರೆ.

ಅದೇ ರೀತಿ, ಮುಂದಿನ ಚುನಾವಣೆಗಳಲ್ಲಿ ಈ ಭಿನ್ನಮತೀಯ ಶಾಸಕರಿಗೂ ಬಿಜೆಪಿ ಟಿಕೆಟ್‌ನ ಭರವಸೆಯನ್ನು ಕೊಡಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.

ಇಂಥದ್ದೊಂದು ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಕುಮಾರಸ್ವಾಮಿ, ರಾಜ್ಯದ ಮೂರು ಕಡೆ ನಡೆದ ಉಪಚುನಾವಣೆಗಳ ಸೋಲಿನ ಅದರಲ್ಲೂ ಗೌಡ ಕುಟುಂಬದ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಚನ್ನಪಟ್ಟಣ ಕ್ಷೇತ್ರವೂ ಕೈಬಿಟ್ಟುಹೋದುದರಿಂದ ಕಂಗೆಟ್ಟಿದ್ದರೂ, ಸುಧಾರಿಸಿಕೊಂಡು ಇದೀಗ ದೆಹಲಿಗೆ ಹೊರಟು ನಿಂತಿದ್ದಾರೆ.

ಮತ್ತೆ ರೆಸಾರ್ಟ್ ರಾಜಕೀಯ...
ಈಗಾಗಲೇ ಮುಂಬೈ ಅಥವಾ ಗೋವಾಕ್ಕೆ ತೆರಳುವ ಸಿದ್ಧತೆಯಲ್ಲಿದ್ದೇವೆ ಎಂದು ಅನರ್ಹರಾಗಿ ಈಗ ಮರಳಿ ಅರ್ಹರಾಗಿರುವ ಶಾಸಕರಲ್ಲೊಬ್ಬರಾದ ಬೇಳೂರು ಗೋಪಾಲ ಕೃಷ್ಣ ಘೋಷಿಸಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಜತೆ ಸೇರಿಕೊಂಡು ಪರ್ಯಾಯ ಸರಕಾರದ ಗುರಿಯೊಂದಿಗೆ ಸರಕಾರದ ವಿರುದ್ಧ ಭಿನ್ನರನ್ನು ಎತ್ತಿಕಟ್ಟಿದ್ದಲ್ಲದೆ, ರಾಜ್ಯಪಾಲರನ್ನು ಭೇಟಿಯಾಗಿ ಬೆಂಬಲ ವಾಪಸ್ ಪತ್ರ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕುಮಾರಸ್ವಾಮಿ, ಈಗಲೂ ಅಂಥದ್ದೇ ತಂತ್ರಗಾರಿಕೆ ರೂಪಿಸುತ್ತಿದ್ದಾರೆಯೇ, ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗುತ್ತಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿರುವ ಅಂಶ.
ಇವನ್ನೂ ಓದಿ