ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಂಗೀಕುಸ್ತಿ: ರಾಷ್ಟ್ರಪತಿ ಆಡಳಿತಕ್ಕೆ ಗವರ್ನರ್ ಶಿಫಾರಸು (BJP | Congress | H R Bhardwaj | Yeddyurappa | President's rule | Governor)
PR
ತರಾತುರಿಯಲ್ಲಿ ನೂತನ ಶಾಸಕರ ಪ್ರಮಾಣವಚನ, 10 ಮಂದಿ ಬಿಜೆಪಿ ಶಾಸಕರ ಬೆಂಬಲದೊಂದಿಗೆ ತಮ್ಮ ಸರಕಾರ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರಾಳರಾಗುತ್ತಿದ್ದಂತೆಯೇ ಇತ್ತ 16 ಶಾಸಕರ ಅನರ್ಹತೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ರಾಜ್ಯಪಾಲ ಭಾರದ್ವಾಜ್ ಭಾನುವಾರ ರಾತ್ರಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಶಿಫಾರಸು ಮಾಡಿದ್ದಾರೆ.

ಕಳೆದ ಅಕ್ಟೋಬರ್ 10ರಂದು 16 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆಜಿ ಬೋಪಯ್ಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಶುಕ್ರವಾರ ನೀಡಿರುವ ತೀರ್ಪು ಮತ್ತು ಅದರ ನಂತರದ ರಾಜಕೀಯ ಬೆಳವಣಿಗೆಯನ್ನು ಆಧರಿಸಿ ರಾಜ್ಯಪಾರು ಭಾನುವಾರವೇ ರಾಷ್ಟ್ರಪತಿಗೆ ವಿಶೇಷ ವರದಿ ರವಾನಿಸಿದ್ದಾರೆ ಎಂದಷ್ಟೇ ರಾಜಭವನದ ಪ್ರಕಟಣೆ ತಿಳಿಸಿದೆ. ಆದರೆ ದೆಹಲಿ ಮೂಲಗಳ ಪ್ರಕಾರ ಯಡಿಯೂರಪ್ಪ ಸರಕಾರದ ವಿರುದ್ಧ ರಾಜ್ಯಪಾಲರು ಕಠಿಣ ನಿಲುವು ತಳೆದಿದ್ದಾರೆ ಎನ್ನಲಾಗಿದೆ.

ತಮ್ಮ ವಿಶೇಷಾಧಿಕಾರಿ ತಿವಾರಿ ಮೂಲಕ ರಾಜ್ಯಪಾಲರು ವರದಿಯನ್ನು ದೆಹಲಿಗೆ ರವಾನಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ರಾತ್ರಿಯೇ ತಿವಾರಿ ದೆಹಲಿಗೆ ವರದಿಯನ್ನು ಕೊಂಡೊಯ್ದಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ಸೋಮವಾರ ನಡೆಯಲಿದ್ದು, ಅದಕ್ಕೂ ಮುನ್ನ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯಪಾಲರ ವರದಿಗೆ ಗ್ರೀನ್ ಸಿಗ್ನಲ್ ದೊರೆಯುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

PTI
ರಾಜ್ಯಪಾಲರಿಗೆ ಕಾದು ಸುಸ್ತಾದ ಬಿಜೆಪಿ ಶಾಸಕರು, ಮುಖಂಡರು:
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಠಿಕಾಣಿ ಹೂಡಿದ್ದ ರಾಜ್ಯಪಾಲರು ಭಾನುವಾರ ಸಂಜೆ ಬೆಂಗಳೂರಿಗೆ ವಾಪಸಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಕೇಂದ್ರಕ್ಕೆ ಕಳುಹಿಸಬೇಕಿದ್ದ ವರದಿ ಸಿದ್ದಗೊಳಿಸಿ ವಿಶೇಷಾಧಿಕಾರಿ ತಿವಾರಿ ಮೂಲಕ ಅದನ್ನು ರವಾನಿಸಿದರು. ಈ ಸಂದರ್ಭದಲ್ಲಿ ರಾಜಭವನಕ್ಕೆ ಎಲ್ಲರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ಸರಕಾರಕ್ಕೆ ಬೆಂಬಲ ಸೂಚಿಸಿದ್ದ 10 ಮಂದಿ ಶಾಸಕರನ್ನು ಕರೆತಂದಿದ್ದ ಬಿಜೆಪಿ ಸಚಿವರು ಮತ್ತು ಮುಖಂಡರು ರಾಜಭವನದ ಮುಂದೆ ಗಂಟೆಗಟ್ಟಲೆ ಕಾದು ನಿಲ್ಲಬೇಕಾಯಿತು. ಕೊನೆಗೆ ಶಾಸಕರ ಭೇಟಿಗೆ ರಾಜ್ಯಪಾಲರು ನಿರಾಕರಿಸಿದರು.

ಅದಕ್ಕೂ ಮೊದಲು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸರಕಾರ ವಜಾಗೆ ಆಗ್ರಹಿಸಿ ದೂರು ಸಲ್ಲಿಸಿದರು.ಇವರ ನಿರ್ಗಮನದ ನಂತರ ಬಿಜೆಪಿ ಸಚಿವರು ಮತ್ತು ಮುಖಂಡರಿಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕಲ್ಪಿಸಲಾಯಿತು. ಧನಂಜಯ್ ಕುಮಾರ್ ನೇತೃತ್ವದ ಮುಖಂಡರ ನಿಯೋಗ ಹತ್ತು ಮಂದಿ ಶಾಸಕರ ಬೆಂಬಲ ಸೂಚಿಸಿದ್ದ ಪತ್ರವನ್ನು ಹಸ್ತಾಂತರಿಸಿದರು. ಆದರೆ ಶಾಸಕರನ್ನು ಹಾಜರುಪಡಿಸುವ ಅವರ ಯತ್ನ ಕೈಗೊಡಲಿಲ್ಲ.

ರಾಜ್ಯಪಾಲರ ವರದಿಯಲ್ಲಿ ಕಠಿಣ ನಿಲುವು?:
ಯಡಿಯೂರಪ್ಪ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಿರುವುದಾಗಿ ಬಿಜೆಪಿಯ 11 ಮತ್ತು ಐವರು ಪಕ್ಷೇತರ ಶಾಸಕರು ಅಕ್ಟೋಬರ್ 6ರಂದು ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ ದಿನದಿಂದ ಇಲ್ಲಿಯವರೆಗೆ ನಡೆದ ಎಲ್ಲ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ರಾಜ್ಯಪಾಲರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯ ಸರಕಾರ ಸಂವಿಧಾನ ವ್ಯವಸ್ಥೆ ಕುಸಿದು ಬೀಳುವಂತೆ ಮಾಡಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಅಕ್ಟೋಬರ್ 11ರಂದು ನಡೆದ ವಿಶ್ವಾಸಮತ ಯಾಚನೆ ವೇಳೆ ತಮ್ಮ ನಿರ್ದೇಶನದ ಹೊರತಾಗಿಯೂ ವಿಧಾನಸಭೆಯ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದು, ನಂತರದ ದಿನಗಳಲ್ಲಿ ಸರಕಾರದ ಅಸ್ತಿತ್ವಕ್ಕೆ ಪೂರಕವಾಗಿ ಪ್ರತಿಪಕ್ಷಗಳ ಸದಸ್ಯರ ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು ಎಂಬ ಅಂಶವನ್ನೂ ರಾಜ್ಯಪಾಲರು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಎರಡನೇ ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು:
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಪಾಲರು ಎರಡನೇ ಬಾರಿಗೆ ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಿದ್ದಾರೆ. 16 ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದಿದ್ದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಕ್ಟೋಬರ್ 11ರಂದು ಧ್ವನಿಮತದ ಮೂಲಕ ಗದ್ದಲದಲ್ಲಿಯೇ ವಿಶ್ವಾಸಮತ ಯಾಚಿಸಿದ್ದರು.

ಬಹುಮತ ಸಾಬೀತುಪಡಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಆಗ ವರದಿ ಸಲ್ಲಿಸಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಿದ್ದರು. ಆದರೆ ಕೇಂದ್ರ ಸರಕಾರ ಇದಕ್ಕೆ ಸಮ್ಮತಿ ಸೂಚಿಸದೆ, ಮತ್ತೊಮ್ಮೆ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಅದರಂತೆ ಅ.14ರಂದು ಮತ್ತೊಮ್ಮೆ ಯಡಿಯೂರಪ್ಪ ವಿಶ್ವಾಸಮತ ಯಾಚಿಸಿ ಸರಕಾರದ ಬಹುಮತ ಸಾಬೀತುಪಡಿಸಿತ್ತು.
ಇವನ್ನೂ ಓದಿ