ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರಾಷ್ಟ್ರಪತಿಗೆ ಶಿಫಾರಸು ಮಾಡಿರುವ ಕ್ರಮವನ್ನು ವಿರೋಧಿಸಿ ಸೋಮವಾರ ಮಧ್ಯಾಹ್ನ ರಾಜಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಸ್ಪಷ್ಟ ಬಹುಮತ ಇದ್ದರೂ ಕೂಡ, ರಾಜ್ಯಪಾಲರು ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಈ ಬಗ್ಗೆ ತೀವ್ರ ಪ್ರತಿಭಟನೆ ನಡೆಸುವುದ ಖಚಿತ ಎಂದು ಹೇಳಿದರು.
ಏತನ್ಮಧ್ಯೆ, ಯಾವುದೇ ಕಾರಣಕ್ಕೂ ರಾಜಭವನದ ಮುಂದೆ ಪ್ರತಿಭಟನೆ, ಧರಣಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ದೇಶಾದ್ಯಂತ ಹೋರಾಟ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಸಂವಿಧಾನ ವಿರೋಧಿ ಧೋರಣೆ ಖಂಡಿಸಿ ದೇಶಾಂದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ತಿಳಿಸಿದ್ದಾರೆ. ರಾಜ್ಯಪಾಲರು ತಮ್ಮ ಹುದ್ದೆಯ ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾರೆ. ಏಕಾಏಕಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿರುವ ನಿರ್ಧಾರವನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗುಡುಗಿದರು.
ರಾಜ್ಯಪಾಲರು ಸರ್ವಾಧಿಕಾರಿಯಾಗೋದು ಬೇಡ-ಸಿ.ಟಿ.ರವಿ: 16 ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸ್ಪೀಕರ್ ಆದೇಶ ರದ್ದುಪಡಿಸಿದ ನಂತರ, ಅವರು ಅರ್ಹ ಶಾಸಕರೇ ಆಗಿದ್ದಾರೆ. ಅವರು ತಮ್ಮ ಬೆಂಬಲವನ್ನು ಬಿಜೆಪಿ ಸರಕಾರಕ್ಕೆ ಕೊಟ್ಟಿದ್ದಾರೆ. ಅಲ್ಲದೇ ಬಿಜೆಪಿ ಸರಕಾರಕ್ಕೆ ಬಹುಮತ ಇದೆ. ಆದರೆ ರಾಜ್ಯಪಾಲರು ದುರುದ್ದೇಶದಿಂದ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿರುವುದನ್ನು ರಾಜ್ಯದ ಜನ ಸಹಿಸಿಕೊಳ್ಳುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಎಚ್ಚರಿಸಿದ್ದಾರೆ.
ಯಾವುದೇ ಕಾರಣಕ್ಕೂ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂಬ ರಾಜ್ಯಪಾಲರ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಇದು ಪ್ರಜಾಪ್ರಭುತ್ವವಾಗಿದೆ. ಯಾವುದೇ ಪ್ರತಿಭಟನೆ ಹತ್ತಿಕ್ಕುವ ಹಕ್ಕು ರಾಜ್ಯಪಾಲರಿಗಿಲ್ಲ. ಅವರು ಸದ್ದಾಂ ಹುಸೇನ್ ಆಗಲಿ, ಈದಿ ಅಮೀನ್ ಆಗಲಿ ಆಗೋದು ಬೇಡ. ಅವರ ಸರ್ವಾಧಿಕಾರ ಧೋರಣೆ ರಾಜ್ಯದ ಜನ ಸಹಿಸೋದಿಲ್ಲ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು.