ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಜಾಪ್ರಭುತ್ವ ಕಗ್ಗೊಲೆಗೆ ರಾಜ್ಯಪಾಲರಿಗೆ ಕಾಂಗ್ರೆಸ್ ಸುಪಾರಿ: ಬಿಜೆಪಿ
(Governor Hansraj Bharadwaj | Karnataka BJP | Government Dismissal | President Rule)
ಪ್ರಜಾಪ್ರಭುತ್ವ ಕಗ್ಗೊಲೆಗೆ ರಾಜ್ಯಪಾಲರಿಗೆ ಕಾಂಗ್ರೆಸ್ ಸುಪಾರಿ: ಬಿಜೆಪಿ
ನವದೆಹಲಿ, ಸೋಮವಾರ, 16 ಮೇ 2011( 11:43 IST )
ರಾಜ್ಯ ಸರಕಾರವನ್ನು ವಜಾಗೊಳಿಸುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೇಂದ್ರಕ್ಕೆ ಸಲ್ಲಿಸಿರುವ ಶಿಫಾರಸನ್ನು ಕಟುಮಾತುಗಳಲ್ಲಿ ಖಂಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಜನಬೆಂಬಲವಿರುವ ಸರಕಾರವನ್ನು ಉರುಳಿಸುವ ಈ ಸಂಚು, ಸರಕಾರ ನಡೆಸಲು ಜನಾದೇಶ ನೀಡಿರುವ ರಾಜ್ಯದ ಜನತೆಯ ಸ್ವಾಭಿಮಾನಕ್ಕೆ ಕೊಡಲಿಯೇಟು ಎಂದು ಬಣ್ಣಿಸಿದ್ದಾರೆ.
ಅಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಲು ಕಾಂಗ್ರೆಸ್‌ನ ದೆಹಲಿಯ ಬಾಸ್‌ಗಳು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕಿಸಿದ ಅವರು, ಪ್ರಜಾಪ್ರಭುತ್ವದ ಕಗ್ಗೊಲೆಗೆ ನಾನು ಬಿಡಲಾರೆ ಎಂದು ಘೋಷಿಸಿದ್ದಾರೆ.
ಇತ್ತೀಚೆಗೆ ನಡೆದ ಹಲವು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲುಂಟಾಗಿದೆ ಮಾತ್ರವೇ ಅಲ್ಲದೆ, ಕೆಲವೆಡೆ ಠೇವಣಿಯನ್ನೂ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಕೈಯಲ್ಲೇನೂ ಮಾಡಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷವು ಇದೀಗ ರಾಜ್ಯ ಸರಕಾರವನ್ನು ಉರುಳಿಸಲು ಕೇಂದ್ರೀಯ ನಾಯಕರಿಗೆ ಮೊರೆ ಹೋಗಿದೆ.
121 ಸದಸ್ಯ ಬಲದ ಬೆಂಬಲವಿರುವ ರಾಜ್ಯ ಸರಕಾರವನ್ನು ವಜಾಗೊಳಿಸಲು ರಾಜ್ಯಪಾಲರು ಮಾಡಿರುವ ಶಿಫಾರಸು ಪ್ರಜಾಪ್ರಭುತ್ವ-ವಿರೋಧಿ ಕ್ರಮ ಎಂದ ಅವರು, ರಾಜ್ಯಪಾಲರು ಈಗ ಕೂಡ ಬಹುಮತ ಸಾಬೀತುಪಡಿಸಲು ಕೋರಿದರೆ, ಈಗಲೇ ಸಾಬೀತುಪಡಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ರಾಜಭವನದಲ್ಲಿ ಶಾಸಕರು, ಮಂತ್ರಿಗಳೊಂದಿಗೆ ಧರಣಿ ನಡೆಸುವುದಾಗಿ ಹೇಳಿದ ಅವರು, ಶಾಸಕರು ಹಾಗೂ ಸಂಸದರ ನಿಯೋಗವನ್ನು ಇಂದು ಅಥವಾ ನಾಳೆ ದೆಹಲಿಗೆ ಕರೆದೊಯ್ದು ರಾಜ್ಯಪಾಲರ ಕ್ರಮದ ವಿರುದ್ಧ ಪ್ರತಿಭಟಿಸುತ್ತೇವೆ ಎಂದರು.
ಮಧ್ಯಾಹ್ನ ಸಂಪುಟ ಸಭೆ... ಇಂದು ಮಧ್ಯಾಹ್ನ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ. ಇದರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾನುವಾರದಿಂದೀಚೆಗೆ ಮುಖ್ಯಮಂತ್ರಿ ನಿವಾಸವು ಭಾರೀ ಚಟುವಟಿಕೆಗಳ ಆಗರವಾಗಿತ್ತು.
ಹಂಸರಾಜ ಅಲ್ಲ, ಕಂಸರಾಜ: ಜನಾರ್ದನ ರೆಡ್ಡಿ ಇದೇ ವೇಳೆ, ಬಳ್ಳಾರಿಯಲ್ಲಿ ಕೆಂಡಾಮಂಡಲರಾಗಿ ಮಾತನಾಡಿದ ಸಚಿವ ಜನಾರ್ದನ ರೆಡ್ಡಿ, ಅವರು ಹಂಸರಾಜ ಅಲ್ಲ, ಕಂಸರಾಜ ಎಂದು ಟೀಕಿಸಿದರಲ್ಲದೆ, ಏನು ಮಾಡಿದರೂ ಬಿಜೆಪಿ ಸರಕಾರವನ್ನು ಉರುಳಿಸುವ ಎಲ್ಲ ಪ್ರಯತ್ನಗಳೂ ಫಲಿಸದ ಕಾರಣದಿಂದಾಗಿ, ಕಾಂಗ್ರೆಸ್ ಪಕ್ಷವು ರಾಜ್ಯಪಾಲರ ಮೂಲಕ ಸಂಚು ರೂಪಿಸುತ್ತಿದೆ ಎಂದರು.