ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕೈ ಏಜೆಂಟ್' ರಾಜ್ಯಪಾಲರೇ ರಾಜ್ಯ ಬಿಟ್ಟು ತೊಲಗಿ: ಈಶ್ವರಪ್ಪ (Ishwarappa | BJP | Governor | Karnataka crisis | Yeddyurappa)
PR
'ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಮೇಲೆ ನಂಬಿಕೆ ಇಲ್ಲ ಎಂಬುದು ಅವರ ದುಡುಕಿನ ನಿರ್ಧಾರದಿಂದ ಸಾಬೀತಾಗಿದೆ' ಎಂದು ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರು ರಾಜ್ಯ ಬಿಟ್ಟು ತೊಲಗಲಿ. ಇಲ್ಲದಿದ್ದರೆ ರಾಜ್ಯದ ಜನರೇ ರಾಜ್ಯಪಾಲರನ್ನು ಓಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಸ್ಪಷ್ಟ ಬಹುಮತ ಇದ್ದರೂ ಕೂಡ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಷ್ಟ್ರಪತಿಗೆ ಶಿಫಾರಸು ಮಾಡಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಪಾದಯಾತ್ರೆ ಮೂಲಕ ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಸಮೀಪ ಆಗಮಿಸಿ ಧರಣಿ ನಡೆಸಿ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಒತ್ತಾಯಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ,ಪ್ರಜಾಪ್ರಭುತ್ವ, ಸಂವಿಧಾನ ದ್ರೋಹಿ ಹಾಗಾಗಿ ಅವರು ಗೌರವದಿಂದ ರಾಜ್ಯಪಾಲರ ಸ್ಥಾನ ಬಿಟ್ಟು ತೊಲಗಲಿ ಎಂದು ಕಿಡಿಕಾರಿದರು. ಹಂಸರಾಜ್ ಭಾರದ್ವಾಜ್‌ರಂತಹ ವ್ಯಕ್ತಿಗಳಿಗೆ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿಯವರಿಗೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಮನವಿ ಸಲ್ಲಿಸುವುದಾಗಿ ಹೇಳಿದರು.

ರಾಜ್ಯಪಾಲರು ತೊಲಗಲಿ ಎಂಬ ಹೋರಾಟವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಾಳೆಯಿಂದಲೇ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಬಹುಮತ ಇರುವ ಸರಕಾರವನ್ನೇ ಕಿತ್ತು ಹಾಕಿ ರಾಷ್ಟ್ರಪತಿ ಆಡಳಿತ ಹೇರಿ ಎಂದು ಶಿಫಾರಸು ಮಾಡಿರುವ ವ್ಯಕ್ತಿ ಜನತೆಯ ದ್ರೋಹಿ, ಸಂವಿಧಾನ ದ್ರೋಹಿ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜನ ದ್ರೋಹಿಯಂತೆ ವರ್ತಿಸುತ್ತಿರುವ ಇಂತಹ ವ್ಯಕ್ತಿಯನ್ನು ರಾಜ್ಯದ ಜನ ಸಹಿಸಲಾರರು. ಇಂತಹ ವ್ಯಕ್ತಿ ರಾಜ್ಯದಲ್ಲಿ ಇರಬಾರದು. ಅವರು ಗೌರವದಿಂದ ತಮ್ಮ ಸ್ಥಾನ ಬಿಟ್ಟು ತೊಲಗಲಿ, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು, ರಾಜ್ಯಪಾಲರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಅವರು ರಾಜಭವನವನ್ನು ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆಯ ತಾಣವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ. ಈ ಎಲ್ಲಾ ಹೈಡ್ರಾಮಾದ ನಿಜವಾದ ಸೂತ್ರಧಾರಿ ಕೇಂದ್ರ ಸರಕಾರ, ಅದರ ಪಾತ್ರಧಾರಿ ರಾಜ್ಯಪಾಲರು ಎಂದು ನಾಯ್ಡು ಕಿಡಿಕಾರಿದರು. ಭಾರದ್ವಾಜ್ ಅವರ ನಡವಳಿಕೆಯಿಂದ ಪ್ರಜಾಪ್ರಭುತ್ವದ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಏನೇ ತಂತ್ರಗಾರಿಕೆ ಮಾಡಿದರೂ ಏನು ಮಾಡಲು ಸಾಧ್ಯವಲ್ಲ. ಬಿಜೆಪಿಗೆ ಜನಾದೇಶವಿದೆ. ಆ ನಿಟ್ಟಿನಲ್ಲಿ ಬಿಜೆಪಿ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕಾಂಗ್ರೆಸ್ ಹಿಂಬಾಗಿಲ ಮೂಲಕ ಆಡಳಿತ ನಡೆಸಲು ಹುನ್ನಾರ ನಡೆಸುತ್ತಿದೆ. ಇತ್ತೀಚೆಗೆ ನಡೆದ ಬಂಗಾರಪೇಟೆ, ಚನ್ನಪಟ್ಟಣ, ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಹೀಗೆ ಕುತಂತ್ರ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಇದೇ ಗತಿಯಾಗಲಿದೆ ಎಂದರು.
ಇವನ್ನೂ ಓದಿ