ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ; ಟ್ರಾಫಿಕ್ ಜಾಮ್-ಪರದಾಟ (road blockade | put traffic | BJP | Congress | Siddaramaiah | Karnataka crisis)
ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ; ಟ್ರಾಫಿಕ್ ಜಾಮ್-ಪರದಾಟ
ಬೆಂಗಳೂರು, ಮಂಗಳವಾರ, 17 ಮೇ 2011( 15:16 IST )
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ವರದಿಯನ್ನು ಕೇಂದ್ರ ಸರಕಾರ ಕೂಡಲೇ ಅಂಗೀಕರಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬೀದಿಗಿಳಿದು ನಾಲ್ಕು ಹೈವೇಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಪರಿಣಾಮ ನಗರದ ಹಲವೆಡೆ ಸಂಚಾರ ದಟ್ಟಣೆಯಿಂದ ಜನರು ಪರದಾಡುವಂತಾಯಿತು.
ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ಗೇಟ್ ಬಳಿ, ತುಮಕೂರು ರಸ್ತೆಯಲ್ಲಿ ಗೊರಗುಂಟೆ ಪಾಳ್ಯದ ಬಳಿ, ಬಳ್ಳಾರಿ ರಸ್ತೆಯಲ್ಲಿ ಕೋಗಿಲು ಕ್ರಾಸ್ ಬಳಿ ಮತ್ತು ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಕಾಂಗ್ರೆಸ್‌ನ ವಿವಿಧ ನಾಯಕರುಗಳ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಸುಮಾರು ಒಂದು ಗಂಟೆಗಳ ಕಾಲ ಬಂದ್‌ನಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿಯೂ ಭಾರೀ ಪ್ರಮಾಣದ ವಾಹನ ಸಂಚಾರ ಸ್ಥಗಿತಗೊಂಡು, ಜನಸಾಮಾನ್ಯರು ಪರದಾಡುವಂತಾಯಿತು.
ಬಿಜೆಪಿ ಸಂವಿಧಾನಕ್ಕೆ ಅವಮಾನ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದೆ. ಈ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದ ಸಿದ್ದರಾಮಯ್ಯ ಮತ್ತು ಸಂಗಡಿಗರನ್ನು ಕೋಗಿಲು ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದರು. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಜಾಫರ್ ಶರೀಫ್, ವಿಧಾನಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ರಾಜ್ಯದ ವಿವಿಧೆಡೆ ಬಿಜೆಪಿಯಿಂದ ಗವರ್ನರ್ ಹಠಾವೋ ಪ್ರತಿಭಟನೆ: ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲೇಬೇಕೆಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಪಕ್ಷ ಬೀದಿಗಿಳಿದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರೆ, ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಕೂಡ ರಾಜ್ಯದ ವಿವಿಧೆಡೆ ರಾಲಿ ನಡೆಸಿ ಅಸಂವಿಧಾನಿಕವಾಗಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿದ ಗವರ್ನರ್ ಎಚ್.ಆರ್.ಭಾರದ್ವಾಜ್ ಅವರನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ಪ್ರತಿಕೃತಿಯನ್ನು ಬೆಂಕಿಹಚ್ಚಿ ಸುಟ್ಟುಹಾಕಿದರು. ಸರ್ವಾಧಿಕಾರಿ ಧೋರಣೆ ತಳೆದು ಬಹುಮತ ಹೊಂದಿರುವ ಸರಕಾರವನ್ನೇ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರುವಂತೆ ಶಿಫಾರಸು ಮಾಡಿದ ರಾಜ್ಯಪಾಲರನ್ನು ಕೇಂದ್ರ ಸರಕಾರ ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಆಡಳಿತಾರೂಢ ಬಿಜೆಪಿ ಪಕ್ಷದ ಕಾರ್ಯಕರ್ತರು ಕೆಲವೆಡೆ ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಯಿತು ಎಂದು ವರದಿ ತಿಳಿಸಿದೆ. ಮೈಸೂರು, ಬಿಜಾಪುರ, ಬೆಳಗಾಂ, ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಬಿಜೆಪಿ ರಾಸ್ತಾ ರೋಖೋ ನಡೆಸಿತು. ಬೆಂಗಳೂರಿನಲ್ಲಿ ಟೌನ್ ಹಾಲ್ ಸಮೀಪ ಪ್ರತಿಭಟನೆ ನಡೆಸಿದರು.