ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರ್ಕಾರ ವಜಾ, ಇಲ್ಲಾಂದ್ರೆ ನಾನೇ ಹೋಗ್ತೀನಿ: ರಾಜ್ಯಪಾಲ ಬೆದರಿಕೆ? (Karnataka Crisis | Governor | HR Bharadwaj | BJP Government)
ಈ ಬಾರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ವಜಾಗೊಳಿಸದಿದ್ದರೆ, ನಾನೇ ಹುದ್ದೆ ತೊರೆಯುತ್ತೇನೆ ಎಂದು ರಾಜ್ಯಪಾಲರು ಕೇಂದ್ರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆಯೇ? ಒಂದು ಮೂಲದ ಪ್ರಕಾರ, ಹೌದು.

ರಾಜ್ಯದ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೇಂದ್ರಕ್ಕೆ ಸಲ್ಲಿಸಿರುವ 'ವಿಶೇಷ ವರದಿ'ಯಲ್ಲಿ ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ಈ ವರದಿಯಲ್ಲಿ ಏನಿದೆ ಎಂಬುದನ್ನು ಸ್ವತಃ ಪ್ರಧಾನಿ ಕೂಡ "ನಾನು ಓದಿಲ್ಲ" ಎಂದು ತಮ್ಮನ್ನು ಮಂಗಳವಾರ ಭೇಟಿಯಾಗಿದ್ದ ಆಡ್ವಾಣಿ ಬಳಿ ಹೇಳುವ ಮೂಲಕ, ಈ ವರದಿಯ ನಿಗೂಢತೆಯನ್ನು ಉಳಿಸಿಕೊಂಡಿದ್ದರು. ರಾಜ್ಯಪಾಲರಾಗಲೀ, ರಾಜಭವನವಾಗಲೀ ಅಥವಾ ಬೇರಾವುದೇ ಅಧಿಕೃತ ಸಂಸ್ಥೆಯಾಗಲೀ ವರದಿಯೊಳಗಿನ ಅಂಶಗಳನ್ನು ಕೂಡ ಬಯಲಾಗಿಸಿಲ್ಲ. ಆದರೂ, ಈ ವರದಿಯು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು, ಬಿಜೆಪಿಯು ದೆಹಲಿಗೆ ದಂಡು ಕರೆದೊಯ್ದಿದ್ದರೆ, ಕಾಂಗ್ರೆಸ್ ರಾಜ್ಯದಲ್ಲೇ ಪ್ರತಿಭಟನೆ ನಡೆಸುತ್ತಿದೆ. ಆದರೆ ಇವೆರಡೂ ಹೋರಾಟಗಳು ತದ್ವಿರುದ್ಧ ಕಾರಣಗಳಿಗಾಗಿ.

ಇದೀಗ ರಾಜ್ಯಪಾಲ ಮತ್ತು ಯಡಿಯೂರಪ್ಪ ನಡುವಿನ ಹೋರಾಟವು ಮರಳಿ ಬಾರದಂತಹಾ ಹಂತಕ್ಕೆ ತಲುಪಿದೆ. ಬಹುಶಃ ಇದೇ ಕಾರಣಕ್ಕಾಗಿ ತುಂಬಾ ದಿನಗಳ ಹಿಂದೆಯೇ ದೆಹಲಿಗೆ ತೆರಳಿದ್ದ ರಾಜ್ಯಪಾಲರು, 'ಇದೊಂದು ಕೇವಲ ಸೌಹಾರ್ದಯುತ ದೆಹಲಿ ಪ್ರವಾಸ' ಎಂದಷ್ಟೇ ಹೇಳಿ, ದೆಹಲಿಗೆ ಬಂದಿದ್ದೇಕೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಂದ ಸುಲಭವಾಗಿ ನುಣುಚಿಕೊಂಡಿದ್ದರು.

11 ಮಂದಿ ಬಿಜೆಪಿ ಹಾಗೂ 5 ಮಂದಿ ಪಕ್ಷೇತರ ಶಾಸಕರ ಅನರ್ಹತೆ ರದ್ದುಗೊಳಿಸಿ ಕಳೆದ ಶುಕ್ರವಾರ ಸುಪ್ರೀಂ ಕೋರ್ಟು ತೀರ್ಪು ನೀಡುವ ಕೆಲವು ದಿನಗಳ ಮೊದಲೇ ದೆಹಲಿಯಲ್ಲಿ ಸಮಾಲೋಚನೆ ಆರಂಭಿಸಿದ್ದ ರಾಜ್ಯಪಾಲರ ನಡೆ ಏನಿತ್ತು ಎಂಬುದು ಯಾರಿಗೂ ಊಹಿಸಲು ಸಾಧ್ಯವಿರಲಿಲ್ಲ. ಆದರೆ ಕೋರ್ಟ್ ತೀರ್ಪು ಹೊರಬಿದ್ದ ತಕ್ಷಣ, ಬಿಜೆಪಿಗೆ ಅದೆಲ್ಲಿಂದ ಈ ಕುರಿತು ಸುಳಿವು ದೊರೆಯಿತೋ... ಬೀದಿಗೇ ಇಳಿಯಿತು. ಬಂಡಾಯ ಶಾಸಕರು ಬಿಜೆಪಿಗೇ ಬೆಂಬಲ ಘೋಷಿಸಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರೆ, ಕಾಂಗ್ರೆಸ್ ಪಕ್ಷವು ಮೂರೂ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿತು. ಆ ಬಳಿಕ, ಭಾರದ್ವಾಜರು, ಇದು ಯಡಿಯೂರಪ್ಪ ಸರಕಾರವನ್ನು ಕಿತ್ತೆಸೆಯಲು ಸಕಾಲ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈಗ ಸ್ಪಷ್ಟ ಬಹುಮತ ಹೊಂದಿರುವ ಯಡಿಯೂರಪ್ಪ ಸರಕಾರದ ವಿರುದ್ಧ ತೆಗೆದುಕೊಳ್ಳಲಾಗುವ ಯಾವುದೇ ನಿರ್ಧಾರವು ಕರ್ನಾಟಕದಲ್ಲಿ ಪಕ್ಷದ ಆತ್ಮಹತ್ಯೆ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್‌ನಲ್ಲೇ ಹಲವರು ಅಪಸ್ವರವೆತ್ತಿದ್ದರು. ಹೀಗಾಗಿ ಸೋಮವಾರ ರಾಜ್ಯಪಾಲರ ವರದಿ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಹಿರಿಯ ಸಚಿವರ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿರಲಿಲ್ಲ. ಮಂಗಳವಾರ ಕೂಡ, ಗೃಹ ಸಚಿವ ಪಿ.ಚಿದಂಬರಂ ಅವರು ತ್ರಿಪುರಾ ಪ್ರವಾಸಕ್ಕೆ ತೆರಳಿದ್ದರೆ, ಪ್ರಣಬ್ ಮುಖರ್ಜಿ ಅಸ್ಸಾಂಗೆ ತೆರಳಿದ್ದಾರೆ. ಹೀಗಾಗಿ ಸಂಪುಟ ಸಭೆ ನಡೆಯುವ ಸಾಧ್ಯತೆ ಕ್ಷೀಣವಾಗಿದೆ.

ಆದರೆ, ಈ ವಾರಾಂತ್ಯದೊಳಗೆ ಸರಕಾರ ವಜಾಗೊಳಿಸದಿದ್ದರೆ, ತಾನೇ ಪದತ್ಯಾಗ ಮಾಡುವುದಾಗಿ ರಾಜ್ಯಪಾಲರು ಕೇಂದ್ರ ಸರಕಾರಕ್ಕೇ ಅಂತಿಮ ಗಡುವು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಯಾಕೆಂದರೆ, ಎರಡನೇ ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಭಾರದ್ವಾಜ್ ಶಿಫಾರಸು ಮಾಡಿದ್ದಾರೆ. ಶಿಫಾರಸುಗಳನ್ನು ಒಪ್ಪದೇ ಇದ್ದರೆ, ಹುದ್ದೆಯಲ್ಲಿ ಮುಂದುವರಿದು ಪ್ರಯೋಜನವೇನು ಎಂಬ ಭಾವನೆ ಅವರದೆಂದು ಮೂಲಗಳು ಹೇಳಿವೆ.

ಒಂದು ವೇಳೆ, ಭಾರದ್ವಾಜ್ ಅವರು ಹುದ್ದೆ ತೊರೆದರೆ, ಆ ಸ್ಥಾನದಲ್ಲಿ ಆಂಧ್ರಪ್ರದೇಶದಲ್ಲಿ ಈಗ ಉದ್ಯೋಗ ಕಳೆದುಕೊಂಡಿರುವ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ರೋಶಯ್ಯ ಅವರನ್ನು ನೇಮಿಸುವ ಸಾಧ್ಯತೆಗಳು ಇವೆ ಎಂಬ ಕುರಿತು ವದಂತಿಗಳಿವೆ.
ಇವನ್ನೂ ಓದಿ