ಜೂನ್ 2ರಿಂದ ಹತ್ತು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ವಿಧಾನಮಂಡಲ ಅಧಿವೇಶನಕ್ಕೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿಲ್ಲ. ಈ ಬಗ್ಗೆ ಕೇಂದ್ರದಿಂದ ಸ್ಪಷ್ಟ ಉತ್ತರ ಬಂದ ನಂತರ ಮುಂದಿನ ನಿರ್ಧಾರ ತಿಳಿಸುವುದಾಗಿ ರಾಜ್ಯಪಾಲರು ತಿಳಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಸಂಜೆ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಜತೆ ಮಾತುಕತೆ ನಡೆಸಿ ಅಧಿವೇಶನ ನಡೆಸಲು ಮತ್ತೊಮ್ಮೆ ಮನವಿ ಮಾಡಿದ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 2ರಿಂದ ಅಧಿವೇಶನ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ ರಾಜ್ಯಪಾಲರಿಂದ ಈವರೆಗೂ ಯಾವುದೇ ಉತ್ತರ ಬಂದಿಲ್ಲವಾಗಿತ್ತು. ಹಾಗಾಗಿ ಇಂದು ಮತ್ತೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದಾಗಿ ವಿವರಿಸಿದರು.
ವಿಶೇಷ ಅಧಿವೇಶನ ನಡೆಸುವ ಕುರಿತು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಾಗ, ಅವರು ಶಾಂತಚಿತ್ತರಾಗಿಯೇ ಆಲಿಸಿದರು. ಆದರೆ ತಾನು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಮಾಡಿರುವ ಶಿಫಾರಸಿಗೆ ಕೇಂದ್ರ ಸರಕಾರ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ ನಿಟ್ಟಿನಲ್ಲಿ ಈ ಬಗ್ಗೆ ಕೇಂದ್ರ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದನ್ನು ಪರಿಶೀಲಿಸಿ ತಾನು ಅದರಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ನಾವು ಈಗಾಗಲೇ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯರಾಜಕಾರಣದ ಬೆಳವಣಿಗೆ, ಸಂಖ್ಯಾಬಲದ ಕುರಿತು ಮನವರಿಕೆ ಮಾಡಿದ್ದೇವೆ. ಅಲ್ಲದೇ ತಾವೂ ಕೂಡ ಸಂವಿಧಾನ ಬಾಹಿರ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಮುಂದೆಯೂ ಬಿಜೆಪಿ ಶಾಸಕರ ಪರೇಡ್ ನಡೆಸಿ ಬಹುಮತ ಸಾಬೀತುಪಡಿಸಿದ್ದೇವೆ ಎಂದರು.