'ನಾವು ಜನಾದೇಶ ಪಡೆದು ಬಂದವರು. ಹಾಗಾಗಿ ಬಿಜೆಪಿ ನಾಮ ನಿರ್ದೇಶಿತ ಸರಕಾರವಲ್ಲ. ಅಧಿವೇಶನ ಕರೆಯುವ ಹಕ್ಕು ನಮಗಿದೆ. ಆದರೆ ಅಧಿವೇಶನ ನಡೆಸುವ ಬಗ್ಗೆ ಅನುಮತಿ ಕೊಡುವ ಬಗ್ಗೆ ರಾಜ್ಯಪಾಲರಿಂದ ಸ್ಪಂದನೆಯೇ ದೊರಕುತ್ತಿಲ್ಲ. ಮತ್ತೊಂದೆಡೆ ಕೇಂದ್ರ ಸರಕಾರ ಕೂಡ ನಿರ್ಧಾರ ತಿಳಿಸುತ್ತಿಲ್ಲ. ಆ ನಿಟ್ಟಿನಲ್ಲಿ ರಾಜ್ಯಪಾಲರು ಹಾಗೂ ಕೇಂದ್ರದ ವಿರುದ್ಧ ಹೋರಾಟ ಅನಿವಾರ್ಯ' ಎಂದು ಗುರುವಾರ ಬಿಜೆಪಿ ಸ್ಪಷ್ಟಪಡಿಸಿದೆ.
ಇಂದು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸಚಿವರು, ರಾಜ್ಯಪಾಲರು ಹಾಗೂ ಕೇಂದ್ರದ ನಿಧಾನಗತಿಯಿಂದಾಗಿ ರಾಜ್ಯದಲ್ಲಿ ವಿಚಿತ್ರ ಸ್ಥಿತಿ ಸೃಷ್ಟಿಯಾಗಿದೆ. ಇಂದು ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ರಾಜ್ಯದ ವಿಷಯದ ಬಗ್ಗೆ ಚರ್ಚೆಯಾಗಿಲ್ಲ. ಕೇಂದ್ರದಿಂದ ವಿಳಂಬ ನೀತಿ ಯಾಕೆ? ಅಲ್ಲದೇ ರಾಜ್ಯಪಾಲರ ಈ ಧೋರಣೆ ಸರಿಯೇ ಎಂದು ತರಾಟೆಗೆ ತೆಗೆದುಕೊಂಡರು.
ಈ ಹಿಂದಿನ ಯಾವ ರಾಜ್ಯಪಾಲರು ಈ ರೀತಿ ವರ್ತಿಸಿಲ್ಲ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಈ ನಡವಳಿಕೆಯಿಂದ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ಇದರಿಂದಾಗಿ ಕರ್ನಾಟಕದ ಹಿತಕ್ಕೆ ಧಕ್ಕೆಯುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾಯಿತ ಜನಪ್ರತಿನಿಧಿಗಳಾದ ಆಡಳಿತ ಪಕ್ಷದ ಶಾಸಕರಿಗೆ ಹಾಗೂ ಸಚಿವರನ್ನು ಭೇಟಿಯಾಗಲು ರಾಜ್ಯಪಾಲರಿಗೆ ಸಮಯಾವಕಾಶದ ಕೊರತೆ ಇರುತ್ತದೆ. ಆದರೆ ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ಹಿಂಬಾಗಿಲ ಮತ್ತು ಮುಂಬಾಗಿಲ ಪ್ರವೇಶ ನೀಡಿ ಮಾತನಾಡಲು ಸಮಯಾವಕಾಶ ಸಿಗುತ್ತದಾ ಎಂದು ಖಾರವಾಗಿ ಪ್ರಶ್ನಿಸಿದರು. ಭಾನುವಾರ ಕೂಡ ಹತ್ತು ಮಂದಿ ಶಾಸಕರು ತೆರಳಿದ್ದಾಗ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಕೇಂದ್ರಕ್ಕೆ ವಿಶೇಷ ವರದಿ ಕಳುಹಿಸಿಕೊಡಲು ಯಾವುದೇ ಸಿಬ್ಬಂದಿ ಕೊರತೆ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮೇ 16ರಿಂದ ಅಧಿವೇಶನ ಕರೆಯುವಂತೆ ಕೋರಿದ್ದೆವು. ಆದರೆ ಆ ಬಗ್ಗೆ ಸಮಾಯಾವಕಾಶ, ಸಿಬ್ಬಂದಿ ಕೊರತೆ ಎಂಬ ಸಬೂಬು ನೀಡಿ ಈವರೆಗೂ ಉತ್ತರ ನೀಡಿಲ್ಲ. ಆ ಕಾರಣಕ್ಕಾಗಿಯೇ ಬುಧವಾರ (ಮೇ 18) ಕೂಡ ರಾಜ್ಯಪಾಲರನ್ನು ಮತ್ತೆ ಭೇಟಿಯಾಗಿ ಅಧಿವೇಶನ ನಡೆಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಇಂದು ಸಂಜೆಯೊಳಗೆ ಅಧಿವೇಶನ ನಡೆಸಲು ಅನುಮತಿ ನೀಡದಿದ್ದಲ್ಲಿ ನಾಳೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಸುರೇಶ್ ಕುಮಾರ್, ಆರ್.ಅಶೋಕ್ ತಿಳಿಸಿದರು.