ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡ್ಡಿ ವಿರುದ್ಧ ಹೋರಾಟಕ್ಕೆ ಬಿಜೆಪಿಯಿಂದ್ಲೇ ಒತ್ತಡ: ಡಿಕೆಶಿ ಬಾಂಬ್ (BJP | Yeddyurappa | Karnataka Crisis | Governor | Congress | Shiv kumar)
ಯಡ್ಡಿ ವಿರುದ್ಧ ಹೋರಾಟಕ್ಕೆ ಬಿಜೆಪಿಯಿಂದ್ಲೇ ಒತ್ತಡ: ಡಿಕೆಶಿ ಬಾಂಬ್
ಬೆಂಗಳೂರು, ಗುರುವಾರ, 19 ಮೇ 2011( 15:26 IST )
'ಭ್ರಷ್ಟಾಚಾರದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬದಲಾವಣೆ ಮಾಡಬೇಕು ಅಂತ ನಾವು ಪ್ರಯತ್ನಿಸಿದೆವು. ಆದರೆ ಅದು ನಮ್ಮಿಂದ ಆಗಲಿಲ್ಲ. ಆದರೆ ಇದೀಗ ಯಡಿಯೂರಪ್ಪ ಬದಲಾವಣೆ ಆಗುವವರೆಗೂ ಹೋರಾಟ ಮುಂದುವರಿಸಿ ಅಂತ ಬಿಜೆಪಿ ರಾಷ್ಟ್ರೀಯ ನಾಯಕರೇ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ದೂರವಾಣಿ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ'...ಹೀಗೆ ಹೊಸ ಬಾಂಬ್ ಸಿಡಿಸಿದವರು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಶಿಫಾರಸು ವರದಿಗೆ ಕೇಂದ್ರ ಸರಕಾರ ಕೂಡಲೇ ಅಂಗೀಕಾರ ನೀಡಬೇಕೆಂದು ಕಾಂಗ್ರೆಸ್ ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬದಲಾಯಿಸಲು ಇದೊಂದು ಉತ್ತಮವಾದ ಅವಕಾಶ. ಹಾಗಾಗಿ ನಿಮ್ಮ ಹೋರಾಟ ಮುಂದುವರಿಸಿ ಅಂತ ಬಿಜೆಪಿ ಹಿರಿಯ ಮುಖಂಡರೇ ದೂರವಾಣಿ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರಿನ ಸಂಸದರೊಬ್ಬರು ಸೇರಿದಂತೆ ಹಿರಿಯ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎಂದ ಅವರು, ಆ ವ್ಯಕ್ತಿ ಬಿಜೆಪಿಯ ಅನಂತ್ ಕುಮಾರ್ ಅವರೋ ಅಥವಾ ಬೇರೆ ಮುಖಂಡರೋ ಎಂಬುದನ್ನು ಮಾತ್ರ ಖಚಿತಪಡಿಸಿಲ್ಲ.
ಸಾಕಷ್ಟು ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಬದಲಾಯಿಸಲು ಬಿಜೆಪಿಯಲ್ಲೇ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆ ಇದಾಗಿದೆ. ಹಾಗಾಗಿ ಏನಾದರೂ ಮಾಡಿ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಬಿಜೆಪಿ ಮುಖಂಡರೇ ಸಂಚು ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರ ಮೇಲೆ ಬಿಜೆಪಿಯವರೇ ಒತ್ತಡ ಹೇರಿ ಹೋರಾಟ ಮುಂದುವರಿಸಿ ಎನ್ನುತ್ತಿದ್ದಾರೆ.
ಇದು ಕೇವಲ ಕಾಂಗ್ರೆಸ್ ಹೋರಾಟ ಮಾತ್ರವಲ್ಲ, ಬಿಜೆಪಿಯದ್ದೂ ಕೂಡ ಆಗಿದೆ!. ನಾವೀಗ ಮುಖ್ಯಮಂತ್ರಿ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ಬಿಜೆಪಿ ಮುಖಂಡರು ನಮಗೆಲ್ಲ ಪೂಜೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದರು. ಏನೇ ಆಗಲಿ ಬಿಜೆಪಿ ಮುಖಂಡರ ಒತ್ತಡ ಇರಲಿ, ಬಿಡಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನ ತ್ಯಜಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಇದೆಲ್ಲಾ ಕಾಂಗ್ರೆಸ್ ಅಪಪ್ರಚಾರ-ಧನಂಜಯ್ ಕುಮಾರ್ ಇಂತಹ ಹೇಳಿಕೆಗಳೆಲ್ಲಾ ಕಾಂಗ್ರೆಸ್ ಪಕ್ಷದ ಅಸಹಾಯಕತೆ ತೋರಿಸುತ್ತದೆ. ಇತ್ತೀಚೆಗೆ ನಡೆದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಆ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಹೋರಾಟ ಮುಂದುವರಿಸುವಂತೆ ಬಿಜೆಪಿ ಮುಖಂಡರಿಂದಲೇ ಕಾಂಗ್ರೆಸ್ ನಾಯಕರಿಗೆ ದೂರವಾಣಿ ಕರೆ ಬಂದಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಭದ್ರಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ,ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅಲ್ಲದೇ ಡಿಕೆಶಿ ಆರೋಪಕ್ಕೆ ತಕ್ಕ ಪುರಾವೆ ಒದಗಿಸಬೇಕು. ಇಲ್ಲದಿದ್ರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.