ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಕ್ಕಟ್ಟಿನಲ್ಲಿ ಸಿಎಂ; ಸ್ಪೀಕರ್ ತಲೆದಂಡಕ್ಕೆ ಬಿಜೆಪಿ ಸಿದ್ದತೆ? (BJP | Yeddyurappa | KG Bopayya | Congress | Karnataka Crisis)
ರಾಜ್ಯ ಸರಕಾರ ಬಿಕ್ಕಟ್ಟಿನಿಂದ ಪಾರಾಗಲು ಬಿಜೆಪಿ ಕಸರತ್ತು ನಡೆಸುತ್ತಿದ್ದು, ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ತಲೆದಂಡಕ್ಕೆ ಸಿದ್ದತೆ ನಡೆಸುತ್ತಿರುವುದಾಗಿ ಬಿಜೆಪಿಯ ಉನ್ನತ ಮೂಲಗಳು ತಿಳಿಸಿರುವುದಾಗಿ ಖಾಸಗಿ ಚಾನೆಲ್‌ವೊಂದು ವರದಿ ಮಾಡಿದೆ.
ಬಿಜೆಪಿಯ 11 ಮತ್ತು ಐವರು ಪಕ್ಷೇತರರ ಶಾಸಕರನ್ನು ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಅನರ್ಹಗೊಳಿಸಿರುವ ಆದೇಶವನ್ನು ಸುಪ್ರೀಂಕೋರ್ಟ್ ಇತ್ತೀಗಷ್ಟೇ ರದ್ದುಗೊಳಿಸಿತ್ತು. ಈ ಬೆಳವಣಿಗೆಯ ನಂತರ ಸ್ಪೀಕರ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಪ್ರತಿಪಕ್ಷಗಳು ಒತ್ತಡ ಹೇರಿದ್ದವು.
ಏತನ್ಮಧ್ಯೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಒತ್ತಡ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಸಚಿವರ ಭಿನ್ನಾಭಿಪ್ರಾಯಗಳಿಂದಾಗಿ ಇಕ್ಕಟ್ಟಿಗೆ ಸಿಲುಕಿರುವ ಕೇಂದ್ರ ಸರಕಾರ ರಾಜ್ಯಪಾಲರ ಶಿಫಾರಸಿಗೆ ಗ್ರೀನ್ ಸಿಗ್ನಲ್ ನೀಡಲು ಹಿಂದೇಟು ಹಾಕುತ್ತಿದೆ. ಆ ನಿಟ್ಟಿನಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ರಾಜ್ಯದ ಬಗ್ಗೆ ಯಾವುದೇ ಪ್ರಸ್ತಾಪವೂ ಆಗಿಲ್ಲವಾಗಿತ್ತು.
ಮಹತ್ವದ ಬೆಳವಣಿಗೆ ಎಂಬಂತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಷ್ಯ ಎಂಬ ಗಾದೆಯಂತೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ರಾಜೀನಾಮೆಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಆ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಚಿಂತನೆ ಬಿಜೆಪಿಯದ್ದು.
ಹೈಕಮಾಂಡ್‌ನ ಈ ಸೂಚನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೊಂದಲದಲ್ಲಿ ಸಿಲುಕುವಂತಾಗಿದೆ. ಇದೀಗ ಚೆಂಡು ಮುಖ್ಯಮಂತ್ರಿಗಳ ಅಂಗಳದಲ್ಲಿದೆ. ಸರಕಾರದ ಅಳಿವು-ಉಳಿವಿನ ಪ್ರಶ್ನೆ ಯಡಿಯೂರಪ್ಪನವರಿಗೆ ಬಿಡಲಾಗಿದೆ. ಆದರೆ ಸ್ಪೀಕರ್ ಅವರು ರಾಜೀನಾಮೆ ಕೊಡುತ್ತಾರೆಯೇ? ಕೇಂದ್ರ ಸರಕಾರ ರಾಜ್ಯಪಾಲರ ವರದಿಯನ್ನು ಮೂಲೆಗುಂಪು ಮಾಡುತ್ತದೆಯೇ? ಕಾಂಗ್ರೆಸ್, ಜೆಡಿಎಸ್ ಪಟ್ಟು ಸಡಿಲಿಸಲಿದೆಯಾ ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.