ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬಾರದು ಎಂದು ಆಡಳಿತಾರೂಢ ಬಿಜೆಪಿ ದೆಹಲಿ ಪರೇಡ್ ನಡೆಸಿದ ಬೆನ್ನಲ್ಲೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗಿ ಬಿಜೆಪಿ ಸರಕಾರದ ವಜಾಕ್ಕೆ ಒತ್ತಾಯಿಸಿದ್ದರು. ಇದೀಗ ವರಿಷ್ಠರ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ದೆಹಲಿಗೆ ತೆರಳಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ವಿಧಾನಪರಿಷತ್ ನಾಯಕಿ ಮೋಟಮ್ಮ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ದೆಹಲಿಗೆ ತೆರಳಿದ್ದಾರೆ.
ನಿಯೋಗ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ರಾಜ್ಯರಾಜಕಾರಣದ ಬೆಳವಣಿಗೆ ಬಗ್ಗೆ ವಿವರಿಸುವುದಾಗಿ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು. ರಾಜ್ಯದಲ್ಲಿರುವುದು ಅಕ್ರಮ ಸರಕಾರ. ಅದ ಕಾನೂನು ಮತ್ತು ಸಂವಿಧಾನ ವಿರೋಧಿಯಾದ ಸರಕಾರ. ಹಾಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಮನವರಿಕೆ ಮಾಡಿಕೊಡಲು ದೆಹಲಿಗೆ ತೆರಳುತ್ತಿದ್ದೇವೆ. ಇದರಲ್ಲಿ ಯಾವುದೇ ಬ್ಲ್ಯಾಕ್‌ಮೇಲ್ ತಂತ್ರ ಇಲ್ಲ ಎಂದರು. ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದು ಹೇಳಿದರು. ಆದರೆ ಸ್ಪೀಕರ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುನರುಚ್ಚರಿಸಿದರು.
ಕೇಂದ್ರ ಸರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರದಿದ್ದರೆ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆ ಕೊಡುವುದಾಗಿ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕಿದ್ದರು. ಅಲ್ಲದೇ ಕೇಂದ್ರದ ವಿರುದ್ಧವೇ ಹೋರಾಟ ನಡೆಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಗುಡುಗಿದ್ದರು.
ವಿಳಂಬಕ್ಕೆ ಮೈತ್ರಿಕೂಟ ಕಾರಣ: ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದರಿಂದ ಕೇಂದ್ರ ಕ್ರಮ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೈತ್ರಿಕೂಟ ಸರಕಾರ ಇರುವುದರಿಂದ ಮತ್ತು ರಾಜ್ಯಸಭೆಯಲ್ಲಿ ಯುಪಿಎಗೆ ಬಹುಮತ ಇಲ್ಲದಿರುವುದರಿಂದ ವಿಳಂಬವಾಗುತ್ತಿದೆ. ಮೈತ್ರಿಕೂಟದ ಇತರ ನಾಯಕರನ್ನೂ ಕಂಡು ಮನವಿ ಮಾಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ತೆರದ ಜೀಪಿನಲ್ಲಾದರೂ ಹೋಗಲಿ, ಪೊಲೀಸ್ ಜೀಪಿನಲ್ಲಾದರೂ ಪ್ರಯಾಣಿಸಲಿ. ಅವರು ಜೈಲಿಗೆ ಹೋಗುವ ದಿನ ದೂರವಿಲ್ಲ. ಯಡಿಯೂರಪ್ಪ ಮಾತಿಗೆ ಮೂರು ಕಾಸಿನ ಬೆಲೆ ಕೊಡುವುದಿಲ್ಲ. ರಾಜ್ಯಪಾಲರ ವಿರುದ್ದ ಸಚಿವ ಸಂಪುಟ ಸದಸ್ಯರು ಪ್ರತಿಭಟಿಸುವುದು ಸರಿಯಲ್ಲ. ರಾಜ್ಯಪಾಲರು ಸರಕಾರದ ಮುಖ್ಯಸ್ಥರು. ಅವರ ವಿರುದ್ಧವೇ ಧರಣಿ ನಡೆಸುವುದು ಸಂವಿಧಾನಕ್ಕೆ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.