ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಿರುಗೇಟು: ಬಿಜೆಪಿ ಸರಕಾರ ಉಳಿಸಲು ಡಿಕೆಶಿ ಬೆಂಬಲ! (BJP | Shiv kumar | CT Ravi | Karnataka Crisis | Congress | Yeddyurappa)
PR
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಹೋರಾಟಕ್ಕೆ ಬಿಜೆಪಿಯ ಹಿರಿಯ ಮುಖಂಡರೇ ಕಾಂಗ್ರೆಸ್‌ ಪಕ್ಷದ ಮುಖಂಡರಿಗೆ ದೂರವಾಣಿ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಸಿ.ಟಿ.ರವಿ, ಬಿಜೆಪಿ ಸರಕಾರ ಉಳಿಸಲು ಡಿಕೆಶಿಯೇ ಬೆಂಬಲ ನೀಡಿದ್ದಾರೆ ಎಂದು ಮತ್ತೊಂದು ಬಾಂಬ್ ಸಿಡಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶಿಫಾರಸ್ಸನ್ನು ಕೇಂದ್ರ ಸರಕಾರ ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಗುರುವಾರ ಕಾಂಗ್ರೆಸ್ ಎಂ.ಜಿ.ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ್ದ ಡಿಕೆಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು(ಅನಂತ್ ಕುಮಾರ್?) ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರೇ ಯಡಿಯೂರಪ್ಪ ವಿರುದ್ಧದ ಹೋರಾಟ ಮುಂದುವರಿಸುವಂತೆ ದೂರವಾಣಿ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು.

ಏಟಿಗೆ ಎದಿರೇಟು:
ಇತ್ತೀಚೆಗಷ್ಟೇ ಚನ್ನಪಟ್ಟಣದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಲು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದರಿಂದಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಬಿಜೆಪಿ ವಕ್ತಾರ, ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿವೆ. ಹಾಗಾಗಿಯೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್‌ನಲ್ಲೂ ಸಾಕಷ್ಟು ಒಳಜಗಳವಿದೆ. ಆ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಡಿಕೆಶಿ ಬೆಂಬಲ ನೀಡಿರುವುದಾಗಿ ವ್ಯಂಗ್ಯವಾಗಿ ಹೇಳಿದರು.

ಚನ್ನಪಟ್ಟಣದಲ್ಲಿ ಡಿಕೆಶಿ ನೆರವಿನಿಂದಲೇ ಬಿಜೆಪಿ ಗೆಲುವು ಸಾಧ್ಯವಾಯಿತು ಎಂದ ರವಿ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಇದು ಏಟಿಗೆ ತಿರುಗೇಟಾ ಅಥವಾ ಡಿಕೆಶಿ ಪರೋಕ್ಷವಾಗಿ ಬೆಂಬಲ ನೀಡಿದ್ದು ನಿಜವೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಅಲ್ಲದೇ 11 ಬಿಜೆಪಿ ಮತ್ತು ಐವರು ಪಕ್ಷೇತರ ಶಾಸಕರು ಅನರ್ಹಗೊಂಡ ಸಂದರ್ಭದಲ್ಲಿ, ಅವರೆಲ್ಲ ಸ್ಮಶಾನಕ್ಕೆ ಹೋದ ಶವದ ಹಾಗೆ ಎಂಬುದಾಗಿ ಈ ಮೊದಲು ತಾನು ಹೇಳಿದ್ದ ಹೇಳಿಕೆ ಸರಿಯಾಗಿದೆ ಎಂದು ರವಿ ಸಮರ್ಥಿಸಿಕೊಂಡರು. ಅನರ್ಹಗೊಂಡಿದ್ದ 16 ಮಂದಿ ಶಾಸಕರ ಪರವಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ ನಂತರ ಅವರಿಗೆಲ್ಲ ಮತ್ತೆ ಜೀವ ಬಂದಿದೆ ಎಂದರು.
ಇವನ್ನೂ ಓದಿ