ಸಂವಿಧಾನ ಬಾಹಿರವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬಹುಮತ ಇರುವ ಸರಕಾರ ಇದ್ದರೂ ಕೂಡ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಮೂಲಕ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸುವುದು ಒಳ್ಳೆಯದು ಎಂದರು.
ನಗರದ ಕೆಂಪೇಗೌಡ ಬಸ್ ನಿಲ್ದಾಣದ ಸಮೀಪ ಮೆಟ್ರೋ ರೈಲಿನ ಸುರಂಗ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಜನಾದೇಶ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರನ್ನು ಕೇಂದ್ರ ಸರಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದರು.
ರಾಜ್ಯಪಾಲರ ವರದಿಯನ್ನು ತಿರಸ್ಕರಿಸುವಂತೆ ಈಗಾಗಲೇ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದೆ. ಆದರೆ ರಾಜ್ಯಪಾಲರೇ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರಕಾರ ಕೂಡ ಸೂಕ್ತ ನಿರ್ಧಾರ ತಿಳಿಸದೆ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಏನೇ ಆದರೂ ರಾಜ್ಯಪಾಲರು ರಾಜ್ಯದಿಂದ ತೊಲಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೇರಲು ಈ ರೀತಿ ಸಂಚು ರೂಪಿಸಿರುವುದಾಗಿ ಯಡಿಯೂರಪ್ಪ ಆರೋಪಿಸಿದರು. ಪ್ರತಿಪಕ್ಷಗಳು ಅಧಿಕಾರಕ್ಕೇರಲು ರಾಜ್ಯಪಾಲರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು. ಆ ನಿಟ್ಟಿನಲ್ಲಿ ರಾಜ್ಯಪಾಲರು ರಾಜಭವನವನ್ನು ರಾಜಕೀಯ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು ಜನಾದೇಶ ಪಡೆದ ಸರಕಾರವನ್ನೇ ಉರುಳಿಸಲು ಷಡ್ಯಂತ್ರ ರೂಪಿಸಿರುವುದಾಗಿ ಕಿಡಿಕಾರಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯಪಾಲರು ಸಾರ್ವಜನಿಕ ಮತ್ತು ಖಾಸಗಿ ಸಮಾರಂಭಗಳಲ್ಲಿ ಬಿಜೆಪಿ ಸರಕಾರವನ್ನು ಟೀಕಿಸುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಸಂವಿಧಾನದ ವರಿಷ್ಠರು ಹಾಗಾಗಿ ಅವರು ಸರಕಾರಕ್ಕೆ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ಅದನ್ನೆಲ್ಲ ಬಿಟ್ಟು ಪ್ರತಿಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ದೂರಿದರು.