ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗವರ್ನರ್ ವಿರುದ್ಧ ಪ್ರತಿಭಟನೆ ಸಂವಿಧಾನಕ್ಕೆ ಅಪಚಾರ:ಸಿದ್ದು (Siddaramaiah | BJP | Congress | Governor | Karnataka Crisis | Yeddyurappa)
ಗವರ್ನರ್ ವಿರುದ್ಧ ಪ್ರತಿಭಟನೆ ಸಂವಿಧಾನಕ್ಕೆ ಅಪಚಾರ:ಸಿದ್ದು
ಬೆಂಗಳೂರು, ಶನಿವಾರ, 21 ಮೇ 2011( 09:22 IST )
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ಬಿಜೆಪಿ ಸಚಿವರು, ಶಾಸಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಶಿಫಾರಸಿನ ಅನ್ವಯ ರಾಜ್ಯ ಬಿಜೆಪಿ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರುವಂತೆ ಒತ್ತಾಯಿಸಲು ನವದೆಹಲಿಗೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಪಕ್ಷವೇ ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸ ಎಂದರು.
ಸಂವಿಧಾನ ಮುಖ್ಯಸ್ಥರಾದ ರಾಜ್ಯಪಾಲರು ಸಂವಿಧಾನ ಬದ್ದವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಸಚಿವರು, ಶಾಸಕರು ಪ್ರತಿಭಟನೆ ನಡೆಸುತ್ತಿರುವುದು ಸಂವಿಧಾನಕ್ಕೆ ಅಪಚಾರ ಎಸಗಿದಂತೆ ಎಂದು ಆಕ್ರೋಶವ್ಯಕ್ತಪಡಿಸಿದರು.
16 ಶಾಸಕರನ್ನು ಅನರ್ಹಗೊಳಿಸಿ ಸಂವಿಧಾನ ಬಾಹಿರ ಕ್ರಮಕೈಗೊಂಡು ಸ್ಪೀಕರ್ ಮತ್ತು ಮುಖ್ಯಮಂತ್ರಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಇದೀಗ ಬಿಜೆಪಿ ಜನರ ದಿಕ್ಕು ತಪ್ಪಿಸಲು ಪ್ರತಿಭಟನೆಯ ನಾಟಕವಾಡುತ್ತಿದೆ. ಮೊದಲು ಸ್ಪೀಕರ್ ಮತ್ತು ಯಡಿಯೂರಪ್ಪ ರಾಜೀನಾಮೆ ಕೊಡಬೇಕು, ರಾಜ್ಯಪಾಲರಲ್ಲ ಎಂದರು.
ಅವರು ಮಾಡುತ್ತಿರುವ ಭ್ರಷ್ಟಾಚಾರಕ್ಕೆ, ಸಂವಿಧಾನ ವಿರೋಧಿ ಕೆಲಸಗಳಿಗೆ ನಾವೆಲ್ಲ ಬೆಂಬಲ ನೀಡಬೇಕೆಂದು ಜನಾಂದೋಲನ ನಡೆಸಲು ಹೋಗುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದರು.