ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗವರ್ನರ್ ಹಠಾವೋ - ಬಿಜೆಪಿ ಹೋರಾಟ ಶುರು: 'ಕೈ' ಅಡ್ಡಿ (BJP | Karnataka Crisis | Congress | Governor | JDS | Yeddyurappa)
PR
ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮೊದಲ ಹಂತದ ಹೋರಾಟಕ್ಕೆ ಶನಿವಾರ ಚಾಲನೆ ನೀಡುವ ಮೂಲಕ ಬೀದಿಗಳಿದಿದೆ. ಮತ್ತೊಂದೆಡೆ ಬಿಜೆಪಿ ಜನಾಂದೋಲನಕ್ಕೆ ಕಾಂಗ್ರೆಸ್ ಕೂಡ ತೀವ್ರ ಪ್ರತಿರೋಧ ಒಡ್ಡಿದೆ.

ಜನಾದೇಶ ಪಡೆದಿರುವ ಬಿಜೆಪಿ ಸರಕಾರಕ್ಕೆ ಕಳೆದ ಮೂರು ವರ್ಷಗಳಿಂದ ಒಂದಲ್ಲ, ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ರಾಜ್ಯಪಾಲರ ಶಿಫಾರಸಿಗೆ ಕೇಂದ್ರ ಅಂಗೀಕಾರ ನೀಡಬಾರದು ಮತ್ತು ಗವರ್ನರ್ ಹಠಾವೋ, ಬಿಜೆಪಿ ಬಚಾವೋ ಎಂಬ ಹೋರಾಟಕ್ಕೆ ಮೈಸೂರಿನಲ್ಲಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಆರಂಭಗೊಂಡಿದ್ದು, ರಾಯಚೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆಗೆ ಚಾಲನೆ ನೀಡಿದರು.

ಮೈಸೂರಿನ ಗಾಂಧಿಚೌಕದಲ್ಲಿ ರಾಜ್ಯಪಾಲ ಹಠಾವೋ ಅಭಿಯಾನಕ್ಕೆ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕೋಟೆ ಆಂಜನೇಯ ದೇವಾಲಯದವರೆಗೆ ರಾಲಿ ತೆರಳಿದೆ. ಸಂಸದ ಅನಂತ ಕುಮಾರ್, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಜನಾಂದೋಲನಕ್ಕೆ ಚಾಲನೆ ನೀಡುವ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿ ವಿರೋಧ ವ್ಯಕ್ತಪಡಿಸಲು ಸಿದ್ದತೆ ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹೊರಗಡೆಯೇ ಕಾದು ನಿಂತಿದ್ದ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಹೊರಗಡೆ ಆಗಮಿಸುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ಅವರನ್ನೆಲ್ಲಾ ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ರಾಯಚೂರಿನಲ್ಲಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗವರ್ನರ್ ಹಠಾವೋ ಜನಾಂದೋಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಯೂ ನಗರಸಭೆ ಬಳಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಮೈಸೂರು ಮತ್ತು ರಾಯಚೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿದ್ದರಿಂದ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾಧ್ಯಕ್ಷರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಭಾರದ್ವಾಜ್‌ಗೆ ಅಧಿಕಾರದ ಹುಚ್ಚು-ಸಿಎಂ ವಾಗ್ದಾಳಿ
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಅಧಿಕಾರದ ಹುಚ್ಚು ಎಂದು ಮತ್ತೆ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರು ತಿಂಗಳ ಕಾಲ ರಾಜ್ಯದಲ್ಲಿ ರಾಜ್ಯಭಾರ ಮಾಡುವ ಕನಸು ಕಂಡಿದ್ದರು. ನಾನು ಅವರನ್ನು ಭೇಟಿಯಾದ ಸಂದರ್ಭದಲ್ಲಿ ನೀವು ರಾಜೀನಾಮೆ ನೀಡಿ, ಚುನಾವಣೆಗೆ ಹೋದರೆ 150 ಸೀಟು ಗಳಿಸುತ್ತೀರಿ ಎಂದು ಗವರ್ನರ್ ಸಲಹೆ ನೀಡಿದ್ದರು ಎಂದು ಆರೋಪಿಸಿದರು.

ರಾಯಚೂರಿನಲ್ಲಿ ಗವರ್ನರ್ ಹಠಾವೋ ಪ್ರತಿಭಟನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಕುತಂತ್ರದಿಂದಾಗಿ ರಾಜ್ಯಪಾಲರ ಶಿಫಾರಸಿನ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರಕಾರ ಕೂಡ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ರಾಜ್ಯಾಪಾಲರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕು. ಹಾಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಇಂದು ಮೊದಲ ಹಂತದ ಹೋರಾಟಕ್ಕೆ ಚಾಲನೆ ದೊರೆತಿದೆ. ಭಾನುವಾರದಿಂದ ಎರಡನೇ ಹಂತದಲ್ಲಿ 9 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಇವನ್ನೂ ಓದಿ