ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಛೇ...ಕೇಂದ್ರದ ನಿರ್ಧಾರ ತೃಪ್ತಿ ತಂದಿಲ್ಲ: ಸಿದ್ದರಾಮಯ್ಯ (Congress | Siddaramaiah | BJP | Karnataka Crisis | Governor | Yeddyurappa)
ರಾಜ್ಯಸಭೆಯಲ್ಲಿ ನಮಗೆ ಬಹುಮತ ಇಲ್ಲದೆ ಇರುವ ಕಾರಣ ಕೇಂದ್ರ ಸರಕಾರ ರಾಜ್ಯಪಾಲರ ವರದಿಯನ್ನು ತಿರಸ್ಕರಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಅಭಿಪ್ರಾಯವ್ಯಕ್ತಪಡಿಸಿದ್ದು, ಆದರೂ ಕೇಂದ್ರದ ಈ ನಿರ್ಧಾರ ತಮಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲೇಬೇಕೆಂದು ಒತ್ತಡ ಹೇರುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ದೆಹಲಿಗೆ ತೆರಳಿ ಪ್ರಧಾನಿ ಮತ್ತು ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಆದರೆ ಗೃಹಸಚಿವಾಲಯ ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸಿ, ಪ್ರಧಾನಿಗೆ ಕಳುಹಿಸಿಕೊಟ್ಟಿತ್ತು. ಕೊನೆಗೂ ಪ್ರಧಾನಿ ಮನಮೋಹನ್ ಸಿಂಗ್ ಕೂಡ ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸುವ ಮೂಲಕ ಯಡಿಯೂರಪ್ಪ ಬಚಾವ್ ಆಗಿದ್ದರು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ವರದಿಯನ್ನು ಕೇಂದ್ರ ತಿರಸ್ಕರಿಸಿದ ನಂತರ ಬೆಂಗಳೂರಿಗೆ ವಾಪಸ್ ಆದ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡುತ್ತ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ರಾಜ್ಯಪಾಲರ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಕೂಡಲೇ, ಯಡಿಯೂಪ್ಪ ಭ್ರಷ್ಟಾಚಾರವನ್ನೇ ನಡೆಸಿಲ್ಲ, ಸ್ವಜನಪಕ್ಷಪಾತ ಮಾಡಿಲ್ಲ, ರಾಜ್ಯಾಂಗಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರ್ಧವಲ್ಲ. ಅವರು ನೈತಿಕವಾಗಿ ಮತ್ತು ಕಾನೂನು ರೀತಿಯಲ್ಲಿ ಅಧಿಕಾರದಲ್ಲಿ ಮುಂದುವರಿಯಲೇಬಾರದು ಎಂದರು.

ನಮಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ, ಅಲ್ಲದೇ ಎಡಪಕ್ಷಗಳು ನಮ್ಮನ್ನು ಬೆಂಬಲಿಸುವ ವಿಶ್ವಾಸ ಕೂಡ ನಮಗಿಲ್ಲ. ಹಾಗಾಗಿ ಕೇಂದ್ರ ಸರಕಾರ ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸ್ಪೀಕರ್ ಕೆ.ಜಿ.ಬೋಪಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರ ರಾಜ್ಯಪಾಲರ ವರದಿಯನ್ನು ತಿರಸ್ಕರಿಸಿದ್ದು ಕಾಂಗ್ರೆಸ್‌ಗೆ ಹಿನ್ನಡೆ ಎಂದು ಏಕೆ ಭಾವಿಸುತ್ತೀರಿ ಎಂದು ಪ್ರಶ್ನಿಸಿದ ಅವರು, ನಮಗೆ ರಾಜ್ಯಸಭೆಯಲ್ಲಿ ಬಹುಮತ ಇದ್ದಿದ್ದರೆ ಇಷ್ಟೊತ್ತಿಗೆ ರಾಜ್ಯಸರಕಾರವನ್ನು ಒದ್ದು ಹೊರಹಾಕುತ್ತಿದ್ದೇವು ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಕೇಂದ್ರ ಸರಕಾರ ರಾಷ್ಟ್ರಪತಿ ಆಡಳಿತ ಹೇರಲು ಅನುಮತಿ ನೀಡದಿದ್ದರೆ, ಕಾಂಗ್ರೆಸ್ ಶಾಸಕರೆಲ್ಲ ಸಾಮೂಹಿಕ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ನೋಡ್ರಿ ನಾನು ಈಗಾಗಲೇ ಹೇಳಿದ್ದೇನೆ, ಅದೊಂದು ಸಲಹೆ ಅಷ್ಟೇ. ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜೀನಾಮೆ ಕೊಡುವ ಬಗ್ಗೆ ಕೆಲವು ಶಾಸಕರು ಅಭಿಪ್ರಾಯವ್ಯಕ್ತಪಡಿಸಿದ್ದರು ಅಷ್ಟೇ. ಹಾಗಂತ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇವನ್ನೂ ಓದಿ