ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಮಗ್ಯಾಕ್ರಿ ನಿರಾಸೆ, ಕಾಂಗ್ರೆಸ್ ಉತ್ತರ ಕೊಡ್ಬೇಕು: ಗೌಡ (Deve gowda | BJP | Governor | JDS | UPA | Karnataka Crisis)
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂಬ ರಾಜ್ಯಪಾಲರ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದಕ್ಕೆ ನನಗ್ಯಾಕೆ ನಿರಾಸೆಯಾಗಬೇಕ್ರಿ, ಬೀದಿಗಿಳಿದು ಹೋರಾಟ ನಡೆಸಿ, ರಾಜೀನಾಮೆ ಕೊಡುತ್ತೇವೆ ಎಂದು ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕರೇ ರಾಜ್ಯದ ಜನತೆಗೆ ಉತ್ತರ ಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗಾರರ ಗೌಡರನ್ನು ಪ್ರಶ್ನಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಇದಾಗಿತ್ತು.

ವರದಿ ತಿರಸ್ಕಾರದಿಂದ ನಿರಾಸೆಯಾಗಿಲ್ಲವೇ ಎಂದು ಮತ್ತೆ ಪ್ರಶ್ನಿಸಿದಾಗ, ಯಾರಿಗೆ ನಿರಾಸೆಯಾಗಬೇಕ್ರಿ...ನಾನು ಇಂತಹದ್ದೆನ್ನೆಲ್ಲಾ ತುಂಬಾ ನೋಡಿದ್ದೇನೆ. ನಮ್ಮದು ಪ್ರಾದೇಶಿಕ ಪಕ್ಷ. ಈ ಬಗ್ಗೆ ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುತ್ತಾವಲ್ಲ ಅವರು ಉತ್ತರ ಕೊಡಬೇಕು ನಾವಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಸೂಕ್ತ ನೆಲೆಯಲ್ಲಿ ಖಚಿತ ನಿರ್ಧಾರ ಕೈಗೊಂಡು ವಜಾಗೊಳಿಸಲು ಕಾಂಗ್ರೆಸ್ ವಿಫಲವಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ಏನೇ ಆದರೂ ಕೇಂದ್ರದ ನಿರ್ಧಾರದಿಂದ ನಾವೇನೂ ಹಿಂದೆ ಸರಿಯುವುದಿಲ್ಲ ರಾಜ್ಯದಲ್ಲಿನ ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ರಾಜ್ಯಪಾಲರ ಶಿಫಾರಸನ್ನು ಅಂಗೀಕರಿಸುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ಕಳೆದ ನಾಲ್ಕು ದಿನಗಳ ಕಾಲ ದೇವೇಗೌಡರು ನವದೆಹಲಿಯಲ್ಲಿ ಬೀಡು ಬಿಟ್ಟದ್ದರು. ಅಲ್ಲದೇ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರಕಿಸಿಕೊಡುವ ಜವಾಬ್ದಾರಿಯೂ ಕೂಡ ತನ್ನದು, ರಾಷ್ಟ್ರಪತಿ ಆಡಳಿತಕ್ಕೆ ಅಂಕಿತ ಹಾಕಿ ಎಂಬುದಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು.

ರಾಜ್ಯಪಾಲರ ಶಿಫಾರಸಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ದೃಢವಾದ ಹೋರಾಟ ನಡೆಸಿಲ್ಲ. ಕೇಂದ್ರ ಸರಕಾರ ಶಿಫಾರಸು ಅಂಗೀಕರಿಸದಿದ್ದರೆ ಶಾಸಕರು, ವಿಧಾನಪರಿಷತ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರೇ ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು ಎಂದು ಗೌಡರು ತಿಳಿಸಿದರು.
ಇವನ್ನೂ ಓದಿ