ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಗರಂ; ಪತ್ರ ಬರೆಯೋ ನೈತಿಕ ಹಕ್ಕು ಕೇಂದ್ರಕ್ಕಿಲ್ಲ (BJP | UPA | Congress | Chidambaram | Yeddyurappa | Karnataka crisis)
WD
ಕೇಂದ್ರ ಸರಕಾರ ಬರೆದಿರುವ ಪತ್ರ ನನ್ನ ಕೈಸೇರಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭ್ರಷ್ಟಾಚಾರದ ಸರಮಾಲೆಯ ಸುಳಿಯಲ್ಲೇ ಸಿಲುಕಿಕೊಂಡಿರುವ ಕೇಂದ್ರಕ್ಕೆ ಪತ್ರ ಬರೆಯುವ ನೈತಿಕ ಹಕ್ಕಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಬುಧವಾರ ಬಾಗಲಕೋಟೆ ನೆರೆ ಸಂತ್ರಸ್ತರಿಗೆ ಆಶ್ರಯ ಮನೆ ಹಂಚಿಕೆಗೆ ತೆರಳುವ ಸಂದರ್ಭದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರ ಜತೆ ಮಾತನಾಡುತ್ತ, ನಮ್ಮದು ಜನಾದೇಶ ಪಡೆದಿರುವ ಸರಕಾರ. ಹಾಗಾಗಿ ದೇಶದ ಇತಿಹಾಸದಲ್ಲಿಯೇ ಕೇಂದ್ರ ಸರಕಾರ ಈ ರೀತಿ ಪತ್ರ ಬರೆಯುವುದು ಅಪರೂಪದ ಪ್ರಸಂಗವಾಗಿದೆ. ಈ ಮೂಲಕ ಕಾಂಗ್ರೆಸ್ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸಿದೆ ಎಂದು ಕಿಡಿಕಾರಿದ ಅವರು, ಇಂತಹ ನಡವಳಿಕೆಯನ್ನು ಜನ ಕ್ಷಮಿಸುವುದಿಲ್ಲ. ಕರ್ನಾಟಕದ ಬಗ್ಗೆ ಇಷ್ಟೊಂದು ಆಸಕ್ತಿ ಯಾಕೆ ನಿಮಗೆ, ಈ ಮೊದಲು ಯಾವ ಸರಕಾರಕ್ಕೆ ಪತ್ರ ಬರೆದಿದ್ದೀರಿ ಎಂದು ಖುದ್ದು ಪ್ರಧಾನಿಯನ್ನು ಭೇಟಿಯಾಗಿ ಪ್ರಶ್ನಿಸುವುದಾಗಿಯೂ ಈ ಸಂದರ್ಭದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೆ, ನಮ್ಮನ್ನು ಪ್ರಶ್ನಿಸುವುದು ಧರ್ಮ. ಅದನ್ನು ಬಿಟ್ಟು ಕಾನೂನು ಸುವ್ಯವಸ್ಥೆಯಲ್ಲಿ ನಾವು ದೇಶದಲ್ಲೇ ನಂ-1 ಸ್ಥಾನದಲ್ಲಿದ್ದೇವೆ. ಹಾಗಿದ್ದ ಮೇಲೆ ಈ ಪತ್ರದ ಉಸಾಬರಿ ಏನು?ಇದಕ್ಕೆ ತಕ್ಕ ಉತ್ತರವನ್ನು ನೀಡುವುದಾಗಿಯೂ ತಿಳಿಸಿದರು.

ರಾಜ್ಯಪಾಲರ ವರದಿ ಆಧಾರದ ಮೇಲೆ ಕೇಂದ್ರ ಸರಕಾರ ಚುನಾಯಿತ ರಾಜ್ಯ ಸರಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಈ ಬಗ್ಗೆ ರಾಷ್ಟ್ರೀಯ ಮುಖಂಡರ ಜತೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ಅಲ್ಲದೇ ಆಡಳಿತಾರೂಢ ಕೇಂದ್ರ ಸರಕಾರವೇ ಸಾಲು, ಸಾಲು ಹಗರಣಗಳಲ್ಲಿ ಸಿಲುಕಿದೆ. ಕೇಂದ್ರದ ಸಚಿವರುಗಳೇ ಜೈಲುಕಂಬಿ ಎಣಿಸುತ್ತಿರುವಾಗ ರಾಜ್ಯಕ್ಕೆ ಸಲಹೆ ನೀಡಿ ಪತ್ರ ಬರೆಯುವ ನೈತಿಕ ಹಕ್ಕು ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಯಾವುದೇ ಕಾರಣಕ್ಕೂ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು. ಏನಿದ್ದರು ರಾಜ್ಯದ ಅಭಿವೃದ್ಧಿಯತ್ತ ಹೆಚ್ಚಿನ ಸಮಯ ಮೀಸಲಿರಿಸುವುದಾಗಿ ಹೇಳಿದರು.

ರಾಜ್ಯ ಸರಕಾರಕ್ಕೆ ಖುದ್ದಾಗಿ ಬುದ್ದಿವಾದ ಹೇಳಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರೇ ಬರೆದಿರುವ ಪತ್ರ ಮಂಗಳವಾರ ಸಂಜೆ ರಾಜಭವನ ತಲುಪಿತ್ತು. ಕರ್ನಾಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಎಷ್ಟೇ ಸೂಚನೆಗಳನ್ನು ನೀಡಿದ್ದರೂ ಅದನ್ನು ತಿರಸ್ಕಾರ ಮಾಡಿರುವ ಸರಕಾರದ ಧೋರಣೆಯನ್ನು ಕಟುವಾಗಿ ಈ ಪತ್ರದಲ್ಲಿ ಟೀಕಿಸಲಾಗಿದೆ.

ರಾಜ್ಯ ಸರಕಾರಕ್ಕೆ ಮಾತ್ರವಲ್ಲದೇ, ರಾಜ್ಯಪಾಲರ ವರದಿಗೂ ಉತ್ತರ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಏಕೆ ನಿಮ್ಮ ವರದಿಯನ್ನು ತಿರಸ್ಕರಿಸಬೇಕಾಯಿತು ಎಂಬ ವಿವರಣೆ ನೀಡಿದೆ ಮತ್ತು ರಾಜ್ಯ ಸರಕಾರದ ಮೇಲೆ ಕಣ್ಗಾವಲು ಇಡುವಂತೆ ರಾಜ್ಯಪಾಲರಿಗೆ ಸಲಹೆಯನ್ನು ನೀಡಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಇವನ್ನೂ ಓದಿ