ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಷ್ಟೇ ದೇವೇಗೌಡ ಬಂದ್ರೂ ನನ್ನ ಅಲ್ಲಾಡಿಸಲು ಸಾಧ್ಯವಿಲ್ಲ: ಸಿಎಂ (Deve gowda | Yeddyurappa | BJP | JDS | Congress | Karnataka crisis)
ಎಷ್ಟೇ ದೇವೇಗೌಡ ಬಂದ್ರೂ ನನ್ನ ಅಲ್ಲಾಡಿಸಲು ಸಾಧ್ಯವಿಲ್ಲ: ಸಿಎಂ
ಬಾಗಲಕೋಟೆ, ಗುರುವಾರ, 26 ಮೇ 2011( 11:35 IST )
ರಾಜ್ಯದ ಜನತೆಯ ಬೆಂಬಲ, ದೇವರ ಆಶೀರ್ವಾದ, ಪ್ರಾಮಾಣಿಕ ಶಾಸಕರ ಬೆಂಬಲ ಇರುವವರೆಗೂ ಎಷ್ಟೇ ದೇವೇಗೌಡರು ಬಂದರೂ ಈ ಯಡಿಯೂರಪ್ಪನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿಯಲ್ಲಿ ಬುಧವಾರ ನಡೆದ 1718ಲಕ್ಷ ರೂಪಾಯಿ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಶಂಕಸ್ಥಾಪನೆ, ಮಹಾಲಿಂಗಪುರದಲ್ಲಿನ ಆಸರೆ ಮನೆಗಳ ಹಸ್ತಾಂತರ, ವಾಜಪೇಯಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ದೇವೇಗೌಡರು ಯಾರನ್ನು ನೆಮ್ಮದಿಯಿಂದ ಇರಲು ಬಿಟ್ಟಿದ್ದಾರೆ ನೀವೇ ಹೇಳಿ?ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಜೆ.ಎಚ್.ಪಾಟೀಲ್, ಎಸ್.ಆರ್.ಬೊಮ್ಮಾಯಿ ಹೀಗೆ ಯಾರನ್ನೂ ಕಾಲೆಳೆಯದೇ ಬಿಟ್ಟಿಲ್ಲ ಎಂದು ದೂರಿದರು.
ಅಲ್ಲದೇ ದೇಶದ ಬೆನ್ನೆಲುಬು ಆಗಿರುವ ಅನ್ನದಾತನಿಗೆ ಶೇ.1ರ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಾಲ ನೀಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸುವುದಾಗಿ ಹೇಳಿದರು. ಸಿಂಗ್ ಅವರು ಉತ್ತಮ ಪ್ರಧಾನಿಯಾಗಿದ್ದರೂ ಅವರ ಮೂಗಿನ ನೇರದಡಿಯೇ ಲಕ್ಷಾಂತರ ಕೋಟಿ ರೂಪಾಯಿಗಳ ಅವ್ಯವಹಾರ ನಡೆಯುತ್ತಿದೆ. ಇವುಗಳನ್ನು ತಡೆದು ಇದೇ ಹಣವನ್ನು ಜನಪರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕಿತ್ತು ಎಂದು ಕುಟುಕಿದರು.