ದೇಶದಲ್ಲಿರುವ ಸಂಪತ್ತು ರಾಜಕಾರಣಿಗಳು ಮತ್ತು ಅಧಿಕಾರಿಗಳ ಸ್ವಾರ್ಥಕ್ಕೆ ಬಳಕೆಯಾಗುತ್ತಿದ್ದು ಪ್ರತಿಯೊಬ್ಬ ಪ್ರಜೆಯೂ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದರು.
ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ಹಮ್ಮಿಕೊಂಡಿದ್ದ ರಾಸ್ ಬಿಹಾರಿ ಬೋಸ್ ಅವರ 125ನೇ ಜನ್ಮ ದಿನಾಚರಣೆ, ಬ್ಯಾರಿಸ್ಟರ್ ಅತ್ತಾವರ್ ಎಲ್ಲಪ್ಪ ಜನ್ಮಶತಮಾನೋತ್ಸವ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ತನು,ಮನ, ಧನ ಯಾವುದನ್ನೂ ಲೆಕ್ಕಿಸದೆ ಹೋರಾಟ ಮಾಡಿದ್ದರು. ಆದರೆ ಇಂದಿನ ರಾಜಕಾರಣಿಗಳು ಮತ್ತು ಅಧಿಕಾರಿಗಳು ದೇಶದ ಅತ್ಯಮೂಲ್ಯ ಸಂಪತ್ತನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದರು.
ದೇಶದ ಸಂಪತ್ತು ಪ್ರತಿಯೊಬ್ಬ ನಾಗರಿಕನಿಗೂ ಸಲ್ಲಬೇಕು. ಕೇವಲ ಕೆಲವೇ ಜನರ ಕೈಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಆದರೆ ಇಂದು ನಮ್ಮಲ್ಲಿರುವ ಸಂಪತ್ತು ರಕ್ಷಿಸಲು ನಾವು ನಮ್ಮವರ ವಿರುದ್ಧವೇ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೆಗ್ಡೆ ವಿಷಾದಿಸಿದರು.