ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿಷ್ಠೆಯಿಂದ ಕೆಲಸ ಮಾಡಿ; ಸಚಿವರಿಗೆ ಸಿಎಂ ತರಾಟೆ (BJP | Yeddyurappa | Congress | Ministers | Karnataka Crisis)
ಪ್ರತಿಪಕ್ಷಗಳ ರಾಜಕೀಯ ಕದನದಲ್ಲಿ ಎರಡನೇ ಬಾರಿ ಜೀವದಾನ ಪಡೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿವೃದ್ಧಿ ಮಂತ್ರ ಜಪಿಸತೊಡಗಿದ್ದು, ಆ ನಿಟ್ಟಿನಲ್ಲಿ ಆಡಳಿತಯಂತ್ರ ಚುರುಕುಗೊಳಿಸುವ ದಿಸೆಯಲ್ಲಿ ಎಲ್ಲಾ ಸಚಿವರು ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ವಿಧಾನಸೌಧದಲ್ಲಿ ಇರಬೇಕು ಎಂದು ತಾಕೀತು ಮಾಡಿದ್ದಾರೆ.

ಬಜೆಟ್ ಯೋಜನೆಗಳ ಅನುಷ್ಠಾನ ಕುರಿತು ವಿಧಾನಸೌಧ ಸಮ್ಮೇಳನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಚಿವರು, ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಖಡಕ್ ಆಗಿ ಮಾತನಾಡಿದ ಅವರು, ಎಲ್ಲ ಸಚಿವರು ವಾರದಲ್ಲಿ ಮೂರು ದಿನ ಜಿಲ್ಲಾ ಪ್ರವಾಸ ಮತ್ತು ಮೂರು ದಿನ ಕಡ್ಡಾಯವಾಗಿ ವಿಧಾನಸೌಧದಲ್ಲಿ ಕಡತಗಳ ವಿಲೇವಾರಿ ಮಾಡಬೇಕು ಎಂದು ಎಚ್ಚರಿಸಿದರು.

ಅಷ್ಟೇ ಅಲ್ಲ ಅಧಿಕಾರಿಗಳು ಕೂಡ ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗಿ ಇತರರಿಗೆ ಮಾದರಿಯಾಗಬೇಕು, ಇಲ್ಲಾಂದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಸರಕಾರದ ಎರಡು ಚಕ್ರಗಳಿದ್ದಂತೆ. ಎರಡೂ ಚಕ್ರ ಒಟ್ಟಾಗಿ ಮುನ್ನಡೆದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇಷ್ಟು ದಿನ ರಾಜಕೀಯ ಕಾರಣಗಳಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ಎಲ್ಲವೂ ಅಂತ್ಯಗೊಂಡಿದೆ. ಉಳಿದ ಎರಡು ವರ್ಷ ಸದೃಢ ಆಡಳಿತ ನೀಡಲು ನಿಮ್ಮೆಲ್ಲರ ಸಹಕಾರ ಬೇಕು. ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲ ಸ್ಥಾನಕ್ಕೆ ಏರಿಸಬೇಕು ಎಂಬುದು ನನ್ನ ಅಭಿಲಾಷೆ ಎಂದರು.

ಎಲ್ಲಾ ಸಚಿವರು ಕಡ್ಡಾಯವಾಗಿ ಮೂರು ದಿನ ಪ್ರವಾಸ ಕೈಗೊಂಡು, ಆಗಬೇಕಾಗಿರುವ ಕೆಲಸದ ಬಗ್ಗೆ ಗಮನ ನೀಡಬೇಕು. ಕುಂಠಿತಗೊಂಡಿರುವ ಪ್ರಮುಖ ಯೋಜನೆಗಳಿಗೆ ಚುರುಕು ಮುಟ್ಟಿಸಬೇಕು. ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳಿಗೆ ತಕ್ಷಣ ಸ್ಪಂದಿಸಬೇಕು. ಯಾವುದೇ ಕಡತವನ್ನು ವಾರಕ್ಕಿಂತ ಹೆಚ್ಚು ಕಾಲ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ ಎಂದು ಸೂಚಿಸಿದರು.
ಇವನ್ನೂ ಓದಿ