'ನಾನು ಅಂದುಕೊಂಡಿರುವ ಕೆಲಸ ಮುಗಿಯುವವರೆಗೆ ಕರ್ನಾಟಕ ಬಿಟ್ಟು ಹೊರ ಹೋಗುವುದಿಲ್ಲ' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಕಳುಹಿಸಿದ್ದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ನಂತರ ರಾಜ್ಯಪಾಲರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಕೇಂದ್ರ ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ನಾನಾಗಿಯೇ ಇಲ್ಲಿಗೆ ಸ್ವಂತ ಇಚ್ಛೆಯಿಂದ ಬಂದಿಲ್ಲ. ನನಗೆ ಒಪ್ಪಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಿ ವಾಪಸ್ ತೆರಳುವುದಾಗಿ ಹೇಳಿದರು.
ಸೋಮವಾರ ರಾಜಭವನದಲ್ಲಿ ಮೈಸೂರು ವಿಶ್ವವಿದ್ಯಾಲಯವು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರ ನಿರಾಕರಿಸಿದ್ದಕ್ಕೆ ನಿಮಗೆ ಮುಜುಗರ ಆಗಿಲ್ಲವೇ ಎಂಬ ಪ್ರಶ್ನೆಗೆ, ನನ್ನ ಕರ್ತವ್ಯ ಮಾಡಿದ್ದೇನೆ. ರಾಜ್ಯದಲ್ಲಿನ ಆಗುಹೋಗುಗಳ ಬಗ್ಗೆ ಪ್ರತಿ ತಿಂಗಳು ಕೇಂದ್ರದ ಗಮನಕ್ಕೆ ತರುವ ಕೆಲಸವನ್ನು ರಾಜ್ಯಕ್ಕೆ ಬಂದಾಗಿನಿಂದಲೂ ಮಾಡುತ್ತಿದ್ದು, ವರದಿಯನ್ನು ಒಪ್ಪುವುದು, ಬಿಡುವುದು ಕೇಂದ್ರಕ್ಕೆ ಸೇರಿದ್ದು. ಹಾಗಾಗಿ ಮುಜುಗರದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ನೀಡಿರುವ ಈ ದೊಡ್ಡ ಬಂಗ್ಲೆ, ಉತ್ತಮ ವೇತನ ಹಾಗೂ ಸಿಬ್ಬಂದಿ ಸುಮ್ಮನೆ ಕುಳಿತುಕೊಳ್ಳಲಿಕ್ಕಾ ಎಂದು ರಾಜ್ಯಪಾಲರು ಮಾರ್ಮಿಕವಾಗಿ ನುಡಿದರು. ಈ ವೇಳೆ ಬಿಜೆಪಿ ಸರಕಾರ ಮೂರು ವರ್ಷ ಪೂರೈಸುತ್ತಿರುವುದಕ್ಕೆ ಶುಭಾಶಯ ಹೇಳಿದ ಭಾರದ್ವಾಜ್, ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಪ್ರಗತಿ ಸಾಧಿಸಲು ಎಲ್ಲ ಅವಕಾಶಗಳೂ ಇವೆ ಎಂದರು.