ಗಣಿ ಗುತ್ತಿಗೆ-ಕೋರ್ಟ್‌ಗೆ ಕೊಟ್ಟ ಮಾತು ಉಳಿಸಿಕೊಳ್ಳಿ: ಹೈಕೋರ್ಟ್
ಬೆಂಗಳೂರು, ಗುರುವಾರ, 2 ಜೂನ್ 2011( 15:37 IST )
ಪ್ರಸಕ್ತ ಸಾಲಿನ ಮಾರ್ಚ್ 31ರ ನಂತರ ಮರಳು ಗಣಿಗಾರಿಕೆ ನಡೆಸಲು ಯಾರಿಗೂ ಗುತ್ತಿಗೆ ನೀಡುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ವಾಗ್ದಾನ ಮಾಡಿದ್ದ ಸರಕಾರ, ಅದನ್ನು ಮೀರಿ ಕೆಲವರಿಗೆ ಗುತ್ತಿಗೆ ನೀಡಿರುವುದು ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ.
ಗಣಿ ಇಲಾಖೆಯಲ್ಲಿ ಏನು ನಡೆಯುತ್ತಿದೆ? ನಿಮಗೆ ಮರಳು ಗಣಿ ಗುತ್ತಿಗೆ ವಿಸ್ತರಣೆ ಮಾಡಲು ಅಧಿಕಾರ ಕೊಟ್ಟವರು ಯಾರು?ಗಣಿ ಗುತ್ತಿಗೆಯನ್ನು ಮಾಡಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಗುತ್ತಿಗೆದಾರರು ಸಲ್ಲಿಸಿದ್ದ ಕನಿಷ್ಠ 50 ಅರ್ಜಿಗಳನ್ನು ನಿಮ್ಮ ಮಾತನ್ನು ನಂಬಿ ವಜಾ ಮಾಡಿದ್ದೇವೆ.
ನ್ಯಾಯಾಲಯಕ್ಕೆ ನೀಡಿರುವ ಮಾತನ್ನೂ ಉಳಿಸಿಕೊಳ್ಳಲು ಆಗುವುದಿಲ್ಲವೇ. ಬೇಕಾದವರಿಗೆ ಸಹಾಯ ಮಾಡಿ. ಬೇಡದಿದ್ದವರನ್ನು ದೂರಕ್ಕೆ ತಳ್ಳಿ ಮನಸೋ ಇಚ್ಛೆ ನಡೆದುಕೊಳ್ಳಲು ಇಲಾಖೆ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಮುಖ್ಯನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು.
ಈ ಸಂಬಂಧ ಜೂನ್ 7ರಂದು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಅವರ ಖುದ್ದು ಹಾಜರಿಗೆ ಪೀಠ ಸೂಚಿಸಿದೆ. ಜೂನ್ 15ರವರೆಗೆ ಯಾರಿಗೆ ಗಣಿ ಗುತ್ತಿಗೆ ನೀಡಲಾಗಿದೆ ಎಂಬ ಕುರಿತಾದ ಸಂಪೂರ್ಣ ಮೂಲ ದಾಖಲೆಗಳನ್ನು ಅಂದು ಹಾಜರುಪಡಿಸುವಂತೆ ಪೀಠ ತಿಳಿಸಿದೆ.
ತಮ್ಮ ಗಣಿ ಗುತ್ತಿಗೆಯನ್ನು ಸರಕಾರ ವಿಸ್ತರಣೆ ಮಾಡದ ಕ್ರಮ ಪ್ರಶ್ನಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಎಂ.ಜಿ.ಸಂತೋಷ್ ಕುಮಾರ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ತುಂಗಾ ನದಿ ತೀರದಲ್ಲಿ ಮರಳು ಗಣಿಗಾರಿಕೆಗೆ ಇವರಿಗೆ ನೀಡಲಾಗಿದ್ದ ಗುತ್ತಿಗೆ ಅವಧಿ 2010ರ ಏಪ್ರಿಲ್‌ನಲ್ಲಿ ಕೊನೆಗೊಂಡಿತ್ತು. ಅದನ್ನು ವಿಸ್ತರಣೆ ಮಾಡುವುದಾಗಿ ಮೊದಲು ಹೇಳಿದ್ದ ಸರಕಾರ. ನಂತರ ವಿಸ್ತರಣೆ ಮಾಡಿರಲಿಲ್ಲ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.