ಯೋಗ ಗುರು ಬಾಬಾ ರಾಮದೇವ್ ಅವರಿಗೆ ರಾಜಕೀಯದ ಮಹತ್ವಾಕಾಂಕ್ಷೆ ಇದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಬಾಬಾ ರಾಮದೇವ್ ಅವರು ಸಂಘ ಪರಿವಾರದ ಮತ್ತೊಂದು ಮುಖ ಎಂದು ವ್ಯಾಖ್ಯಾನಿಸಿರುವ ಅವರು, ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ನಡೆಸಲು ಖರ್ಚು ಮಾಡಿರುವುದು 11ಕೋಟಿ. ಅದು ಕಪ್ಪು ಹಣವೋ ಅಥವಾ ಬಿಳಿ ಹಣವೋ ಎಂಬುದನ್ನು ಹೇಳಲಿ ಎಂದು ಕೆಣಕಿದ್ದಾರೆ.
ಬಾಬಾ ರಾಮದೇವ್ ಅವರು ಯೋಗದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆಂಬುದಕ್ಕೆ ರಾಮಲೀಲಾ ಮೈದಾನದಲ್ಲಿ ನಡೆದ ಪ್ರಹಸನವೇ ಸಾಕ್ಷಿ. ಸರಕಾರದ ಜತೆ ಮಾತುಕತೆ ನಡೆಸಿ, ಬೇಡಿಕೆ ಈಡೇರಿಕೆ ಬಗ್ಗೆ ಕೇಂದ್ರ ಸರಕಾರ ಭರವಸೆ ಕೊಟ್ಟ ನಂತರವೂ ಸತ್ಯಾಗ್ರಹಿಗಳ ಮುಂದೆ ಪ್ರಚೋದನಾಕಾರಿಯಾಗಿ ಮಾತನಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಬಾಬಾ ರಾಮದೇವ್ ಅವರ ಆಸ್ತಿಯ ಮೊತ್ತ, ಅದರ ಮೂಲಗಳನ್ನು ಪತ್ತೆ ಹಚ್ಚಿದರೆ ಬಾಬಾ ಬಂಡವಾಳ ಬಯಲಾಗಲಿದೆ ಎಂದು ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.