ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆರ್ಎಸ್ಎಸ್‌ನಲ್ಲೂ ಭಯೋತ್ಪಾದಕರಿದ್ದಾರೆ: ಪೂಜಾರಿ ವಾಗ್ದಾಳಿ (RSS | Janardana Poojary | Congress | BJP | Yeddyurappa | Anna hazare | Baba)
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಹಗರಣದ ತನಿಖೆ ಬಿಟ್ಟು, ಜನಲೋಕಪಾಲ್ ಕರಡು ಸಮಿತಿ ಸೇರಿದ್ದು ಯಾಕೆ ಎಂದು ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆಯವರನ್ನು' ಖಾರವಾಗಿ ಪ್ರಶ್ನಿಸಿರುವ ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಆರ್ಎಸ್ಎಸ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯೋಗ ಗುರು ಬಾಬಾ ರಾಮದೇವ್ ಅವರಿಗೆ ಬೆಂಬಲ ನೀಡುವ ಪೇಜಾವರಶ್ರೀಗಳಿಗೆ ರಾಜ್ಯದಲ್ಲಿನ ಭ್ರಷ್ಟಾಚಾರ ಕಾಣಿಸುವುದಿಲ್ಲವೇ? ರಾಜ್ಯದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ನಡೆದಿದ್ದರೂ ಕೂಡ ಒಂದು ಮಾತು ಆಡದೆ ಇದೀಗ ಬಾಬಾ ಹೋರಾಟಕ್ಕೆ ಬೆಂಬಲ ನೀಡುವ ಔಚಿತ್ಯ ಏನು ಎಂದು ಕಿಡಿಕಾರಿದರು.
ಬಾಬಾ ರಾಮದೇವ್ ಆರ್ಎಸ್ಎಸ್ ಕುಮ್ಮಕ್ಕಿನಿಂದ ಹೋರಾಟ ನಡೆಸುತ್ತಿರುವುದಾಗಿ ಹೇಳಿದ ಪೂಜಾರಿ, ಆರ್ಎಸ್ಎಸ್‌ನಲ್ಲಿ ಭಯೋತ್ಪಾದಕರೂ ಇದ್ದಾರೆ, ದೇಶಪ್ರೇಮಿಗಳೂ ಇದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು. ರಾಮಲೀಲಾ ಮೈದಾನದಲ್ಲಿ ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ಬಿಜೆಪಿ ಈಗ ಬೊಬ್ಬೆ ಹೊಡೆಯುತ್ತಿದೆಯಲ್ಲ, ಮಂಗಳೂರು ಪಬ್ ದಾಳಿ ನಡೆದಾಗಲೂ ಅದೇ ರೀತಿ ಹೆಣ್ಣು ಮಕ್ಕಳ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತ್ತು. ಆಗ ನಿಮ್ಮ ದೇಹದಲ್ಲಿ ರಕ್ತ ಇರಲಿಲ್ಲವಾಗಿತ್ತಾ? ಆಗ ನೀವು ಯಾಕೆ ಪ್ರತಿಭಟನೆ ಮಾಡಿಲ್ಲ. ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿಯುವ ನೀವು ಕರ್ನಾಟಕದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಹೆಗ್ಡೆ ವಿರುದ್ಧ ತೀವ್ರ ವಾಗ್ದಾಳಿ: ಸ್ವಾಮಿ ಲೋಕಾಯುಕ್ತರೇ ಕ್ಷಮಿಸಬೇಕು...ನಿಮ್ಮ ಮೇಲೆ ತುಂಬಾ ಗೌರವ ನಮಗೆ, ಆದರೆ ನೀವು ಮುಖ್ಯಮಂತ್ರಿಗಳ ಭೂ ಹಗರಣದ ತನಿಖೆ ಬಿಟ್ಟು ಜನಲೋಕಪಾಲ್ ಕರಡು ಸಮಿತಿ ಸೇರಿದ್ದೇಕೆ? ಆ ಸಮಿತಿಗೆ ಸದಸ್ಯರಾಗಲು ಬೇರೆ ಯಾವ ವಕೀಲರೂ ಈ ದೇಶದಲ್ಲಿ ಇರಲಿಲ್ಲವೇ ಎಂದು ಪ್ರಶ್ನಿಸಿರುವ ಪೂಜಾರಿ,ಈ ಬಗ್ಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಬಿಡಿಎ ನಿವೇಶನವನ್ನು ತಮ್ಮ ಮಗನಿಗೆ ನೀಡಿರುವ ಗಂಭೀರ ಆರೋಪ ಇದೆ. ಆ ಬಗ್ಗೆ ನೀವು ಕ್ರಮಕೈಗೊಳ್ಳುವ ಅಧಿಕಾರ ಇತ್ತು. ಆದರೆ ನೀವು ಮುಖ್ಯಮಂತ್ರಿ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಭೂ ಹಗರಣದ ತನಿಖೆ ಬಿಟ್ಟು ಜನಲೋಕಪಾಲ್ ಕರಡು ಸಮಿತಿ ಸದಸ್ಯರಾಗಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿದ್ದೀರಿ. ಈ ರೀತಿ ಯಾಕೆ ಮಾಡಿದಿರಿ ಎಂದು ಆವೇಶಭರಿತರಾಗಿ ನುಡಿದರು.
ನಿಮ್ಮ ಕಾರ್ಯವೈಖರಿ, ನಿಷ್ಠೆ ಮೇಲೆ ಅನುಮಾನ ಪಡುವುದಿಲ್ಲ. ಆದರೆ ಮುಖ್ಯಮಂತ್ರಿ ಭೂ ಹಗರಣದ ತನಿಖೆ ಬಿಟ್ಟು ಹೋದದ್ದೇಕೆ. ನಾವು ನಿಮಗೆ ಎಲ್ಲಾ ರೀತಿ ಬೆಂಬಲ ನೀಡಿದ್ದೇವು. ಆದರೂ ನಿಮಗೆ ಮುಖ್ಯಮಂತ್ರಿ ವಿರುದ್ಧ ಚಾರ್ಜ್‌ಶೀಟ್ ಹಾಕಲು ಆಗಿಲ್ಲ. ನಿಮ್ಮ ಸ್ಥಾನದಲ್ಲಿ ಈ ಪೂಜಾರಿ ಇದ್ದಿದ್ದರೆ ಮೂರು ಗಂಟೆಯೊಳಗೆ ಮುಖ್ಯಮಂತ್ರಿ ವಿರುದ್ಧ ಚಾರ್ಜ್‌ಶೀಟ್ ದಾಖಲು ಮಾಡುತ್ತಿದ್ದೆ ಎಂಬುದಾಗಿಯೂ ಈ ಸಂದರ್ಭದಲ್ಲಿ ಗುಡುಗಿದರು.