ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಚ್‌ಡಿಕೆ ಹುಚ್ಚನಂತೆ ಆಡ್ತಿದ್ದಾರೆ- ಬಿಜೆಪಿಯಿಂದ ದಾಖಲೆ ಬಿಡುಗಡೆ (BJP | Congress | Kumaraswamy | Yeddyurappa | Puttaswamy | Illigal mining)
ಎಚ್‌ಡಿಕೆ ಹುಚ್ಚನಂತೆ ಆಡ್ತಿದ್ದಾರೆ- ಬಿಜೆಪಿಯಿಂದ ದಾಖಲೆ ಬಿಡುಗಡೆ
ಬೆಂಗಳೂರು, ಮಂಗಳವಾರ, 14 ಜೂನ್ 2011( 16:05 IST )
PR
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೌಡರ ಕುಟುಂಬ ಚೀನಾ-ಸಿಂಗಾಪೂರ್‌ಗೆ ಅಕ್ರಮವಾಗಿ ಲಕ್ಷಾಂತರ ಮೆಟ್ರಿಕ್ ಟನ್ ಅದಿರು ಸಾಗಿಸಿರುವುದಾಗಿ ಮತ್ತೆ ವಾಕ್ಸಮರ ಮುಂದುವರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದ್ದು ಮಂಗಳವಾರ ದಾಖಲೆಯನ್ನು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಕುಟುಂಬ ವರ್ಗದವರಿಗೆ ಸೇರಿದ ಕಂಪನಿಗಳು ನಡೆಸಿರುವ ಅದಿರು ವಹಿವಾಟಿನ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ಅದಿರನ್ನು ರಫ್ತು ಮಾಡಿ ಕೋಟ್ಯಂತರ ರೂ.ಗಳಿಸಲಾಗಿದೆ ಎಂದು ಆರೋಪಿಸಿದರು.
ಗಣಿಗಾರಿಕೆಯಲ್ಲಿ ತಮ್ಮ ಕುಟುಂಬದವರಾರು ಇಲ್ಲ ಎನ್ನುವ ಕುಮಾರಸ್ವಾಮಿ, ಈ ಅದಿರು ರಫ್ತು ಮಾಡಿದ್ದು ಯಾರು?ಯಾರನ್ನು ಹೆದರಿಸಿ ಅದಿರು ಪಡೆಯಲಾಯಿತು. ಎಲ್ಲದಕ್ಕೂ ಉತ್ತರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾವೇ ಇದಕ್ಕೂ ಸಂಬಂಧಿಸಿದ ದಾಖಲೆ ನೀಡುತ್ತೇವೆ ಎಂದರು.
ಇದೀಗ ಒಟ್ಟಾರೆ ಭ್ರಮನಿರಸನಗೊಂಡಿರುವ ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡು ಹುಚ್ಚನಂತೆ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಪುಟ್ಟಸ್ವಾಮಿ, ನನ್ನನ್ನು ಟಾಯ್ಲೆಟ್‌ನಲ್ಲಿ ಬಿಡಿಸುವ ಚಿತ್ರ ಎಂಬಂತೆ ವ್ಯಂಗ್ಯವಾಡಿದ್ದಾರೆ. ಇನ್ಮುಂದೆ ನನ್ನ ವಿರುದ್ಧ ಒಂದೇ ಒಂದು ಶಬ್ದ ಮಾತನಾಡಿದ್ರೂ ಹುಷಾರ್ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಗಣಿಗಾರಿಕೆಯಲ್ಲಿ ತಾವು ಯಾರೂ ತೊಡಗಿಲ್ಲ ಎಂದು ಇದುವರೆಗೂ ಹೇಳಿಕೆ ನೀಡುತ್ತಿದ್ದ ಕುಮಾರಸ್ವಾಮಿ, ಈಗಲಾದರೂ ಸತ್ಯ ಒಪ್ಪಿಕೊಂಡು ರಾಜಕೀಯದಿಂದ ನಿವೃತ್ತಿಯಾಗುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹೋದರರಿಗೆ ಸೇರಿದ ಬಿಎಸ್‌ಕೆ ಟ್ರೇಡಿಂಗ್ ಕಂಪನಿ, 2004-05ರಲ್ಲೇ ಅದಿರು ವಹಿವಾಟು ನಡೆಸಿರುವುದು ಅವರು ಸಿಎಂ ಆಗಿದ್ದ ಅವಧಿಯಲ್ಲಿ. ಇದರಿಂದ ಅವರ ಸಹೋದರ ಬಾಲಕೃಷ್ಣೇಗೌಡ, ಪತ್ನಿ ಕವಿತಾ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಕೇವಲ 3 ತಿಂಗಳಲ್ಲಿ 167 ಕೋಟಿ ರೂಪಾಯಿ ಬಂದಿದೆ. ಇಷ್ಟೊಂದು ಹಣ ಬಂದಿರುವ ಮೂಲ ಎಲ್ಲಿಯದು, ಅದನ್ನು ಅವರು ಇದುವರೆಗೂ ಹೇಳಿಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದಂತೆ ತಾವು ಇದುವರೆಗೂ ಮಾಡಿದ ಯಾವುದೇ ಆರೋಪಗಳಿಗೆ ಉತ್ತರ ಕೊಟ್ಟಿಲ್ಲ. ಎಲ್ಲ ಆರೋಪಗಳಿಗೂ ಸೂಕ್ತ ದಾಖಲೆಗಳಿರುವುದರಿಂದ ಎಲ್ಲಿ ಸಿಕ್ಕಿ ಬೀಳುತ್ತೇನೋ ಎಂಬ ಭಯದಿಂದ ಕುಮಾರಸ್ವಾಮಿ ಉತ್ತರ ಕೊಡುವ ಧೈರ್ಯ ಮಾಡುತ್ತಿಲ್ಲ ಎಂದು ಕುಟುಕಿದರು.