ದೇವೇಗೌಡರ ಕುಟುಂಬ ಚೀನಾ-ಸಿಂಗಾಪೂರ್‌ಗೆ ಲಕ್ಷಾಂತರ ಮೆಟ್ರಿಕ್ ಟನ್ ಅದಿರು ಸಾಗಿಸಿರುವುದಾಗಿ ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾನು ಯಡಿಯೂರಪ್ಪನಂತೆ ಹೇಡಿಯಲ್ಲ ಎಲ್ಲದಕ್ಕೂ ನಾನೇ ಉತ್ತರ ಕೊಡುತ್ತೇನೆ ಎಂದು ಹೇಳುವ ಮೂಲಕ ವಾಕ್ಸಮರ ಮುಂದುವರಿದಿದೆ.
ಬುಧವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ತನ್ನ ಪಾಪದ ಕೆಲಸ ಮರೆ ಮಾಚಿಕೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ನಾನೇ ಬಿಡುಗಡೆ ಮಾಡಿದ್ದ ಹಳೇ ದಾಖಲೆಯನ್ನೇ ನಿನ್ನೆ ಬಿಡುಗಡೆ ಮಾಡಿರುವುದಾಗಿ ಹೇಳಿದರು.
ನನ್ನ ಹಾಗೂ ಕುಟುಂಬದ ವಿರುದ್ಧ ಬಿಜೆಪಿ ಈ ಹಿಂದೆ ಮಾಡಿರುವ ಎಲ್ಲಾ ಆರೋಪಗಳಿಗೂ ಉತ್ತರ ಕೊಟ್ಟಿದ್ದೇನೆ. ಬಿಎಸ್‌ಕೆ ಟ್ರೇಡಿಂಗ್ ಕಂಪನಿ ಬಗ್ಗೆ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದೇನೆ. 2004ರಲ್ಲಿ ಬಿಎಸ್‌ಕೆ ಟ್ರೇಡಿಂಗ್ ಕಂಪನಿ ಅದಿರು ರಫ್ತು ಮಾಡಿತ್ತು.
ಆದರೆ ಪುಟ್ಟಸ್ವಾಮಿ ಆ ಇಸವಿಯನ್ನೇ ತಿರುಚಿ ಹೇಳಿದ್ದಾರೆ. ಅಷ್ಟೇ ಅಲ್ಲ 1983ರಲ್ಲಿ ನಮ್ಮ ಕುಟುಂಬ ಬೇರೆಯಾಗಿತ್ತು. ನಾನು, ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್ ಜೊತೆ ನಾನು ಪ್ರತ್ಯೇಕವಾಗಿ ವಾಸವಾಗಿದ್ದೇನೆ. ಕುಟುಂಬದ ಸದಸ್ಯರ ಜತೆ ಯಾವುದೇ ವ್ಯವಹಾರ ಇಲ್ಲ ಎಂದು ವಿವರಿಸಿದರು.
ಬಿಜೆಪಿ ಅನಾವಶ್ಯಕವಾಗಿ ಆರೋಪ ಮಾಡುವುದನ್ನು ಬಿಟ್ಟು ನಿಜವಾದ ದಾಖಲೆ ಬಿಡುಗಡೆ ಮಾಡಲಿ. ಆದರೆ ನಾನು ಯಡಿಯೂರಪ್ಪನಂತೆ ಹೇಡಿಯಲ್ಲ, ಬೇರೇಯವರ ಮೂಲಕ ಉತ್ತರ ಕೊಡಿಸಲು ನಾನು ಹೋಗಲ್ಲ. ಎಲ್ಲ ಆರೋಪಕ್ಕೂ ನಾನೇ ಉತ್ತರ ಕೊಡುತ್ತೇನೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳು ಎಲ್ಲಾ ಆರೋಪದ ಬಗ್ಗೆಯೂ ಮುಕ್ತ ಚರ್ಚೆಗೆ ಬರಲಿ, ನಾನು ಅದಕ್ಕೆ ಸಿದ್ದನಿದ್ದೇನೆ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಸವಾಲು ಹಾಕಿದರು.
WD
ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಹುಚ್ಚನಂತೆ ಆಡ್ತಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪುಟ್ಟಸ್ವಾಮಿ ಟೀಕಿಸಿದ್ದಾರೆ. ಆದರೆ ಅನ್ನ ಹಾಕಿದ ಮನೆಯವರನ್ನೇ ಹುಚ್ಚರನ್ನಾಗಿಸಿದ್ದು ಯಾರು ಎಂಬುದು ಪುಟ್ಟಸ್ವಾಮಿಗೆ ತಿಳಿದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಅನ್ನ ಹಾಕಿದವರ ಮಕ್ಕಳಿಗೆ ಮೋಸ ಮಾಡಿರುವ ಯಡಿಯೂರಪ್ಪ ಎಲ್ಲವನ್ನೂ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಾನು ಅಧಿಕಾರದಲ್ಲಿದ್ದಾಗ ಯಾವುದೇ ಅವ್ಯವಹಾರ ನಡೆಸಿಲ್ಲ, ಅದಿರು ರಫ್ತಿಗೆ ಅವಕಾಶವೂ ನೀಡಿಲ್ಲ. ಹಾಗೇನಾದರೂ ನಿಮ್ಮ ಬಳಿ ಸೂಕ್ತ ದಾಖಲೆಗಳಿದ್ದರೆ ಯಾವುದೇ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಸ್ವತಂತ್ರರು ಎಂದರು. ನಮ್ಮ ಕುಟುಂಬದವರು ಪಲಾಯನವಾದಿಗಳಲ್ಲ, ಬಿಜೆಪಿ ಆರೋಪಕ್ಕೆ ತಾನು ಬಹಿರಂಗ ಚರ್ಚೆಗೆ ಸಿದ್ದ ಎಂದು ಪುನರುಚ್ಚರಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದ ಬಿ.ಜೆ.ಪುಟ್ಟಸ್ವಾಮಿ, ಕುಮಾರಸ್ವಾಮಿ ಮತ್ತು ಕುಟುಂಬ ವರ್ಗದವರಿಗೆ ಸೇರಿದ ಕಂಪನಿಗಳು ನಡೆಸಿರುವ ಅದಿರು ವಹಿವಾಟಿನ ದಾಖಲೆ ಬಿಡುಗಡೆ ಮಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಒಂದು ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರನ್ನು ಮಂಗಳೂರು ಬಂದರಿನಿಂದ ಚೀನಾ, ಸಿಂಗಾಪೂರ್‌ಗೆ ರಫ್ತು ಮಾಡಿ ಕೋಟ್ಯಂತರ ರೂಪಾಯಿ ಗಳಿಸಿರುವುದಾಗಿ ಆರೋಪಿಸಿದ್ದರು.