ಮಹತ್ವದ ಬೆಳವಣಿಗೆಯೂಂದರಲ್ಲಿ ಲಿಂಗಾಯುತ ಸಮುದಾಯದ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಭೇಟಿ ಕಾರಣವನ್ನು ಬಹಿರಂಗಪಡಿಸದ ಪರಮೇಶ್ವರ್, ಮಠಾಧೀಶರ ಆಗಮನಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಮಠಾಧೀಶರು ಸದ್ಯದಲ್ಲೇ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ನನ್ನ ಮನೆಗೆ ಬರುವಂತೆ ಆಹ್ವಾನ ನೀಡಿದ್ದೇನೆ. ಇಂದೊಂದು ಔಪಚಾರಿಕ ಮಾತುಕತೆ ಎಂದು ತಿಳಿಸಿದ್ದಾರೆ.
ಆದರೆ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಮಹಂತ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಲಿಂಗಾಯುತ ಸಮುದಾಯದ 15ಕ್ಕೂ ಹೆಚ್ಚು ಮಂದಿ ಮಠಾಧೀಶರ ಭೇಟಿಯು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅರ್ಧ ಗಂಟೆಗೂ ಹೆಚ್ಚು ಹೊತ್ತು ಸಾಗಿದ್ದ ಮಾತುಕತೆಯಲ್ಲಿ ವಿರೇಶೈವ ಓಲೈಕೆಯೇ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.
ಮಠಾಧೀಶರ ಸಮಸ್ಯೆಗಳನ್ನು ಆಲಿಸಿರುವ ಪರಮೇಶ್ವರ್, ರಾಜ್ಯದಲ್ಲಿ ಲಿಂಗಾಯುತ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದರೆನ್ನಲಾಗಿದೆ. ಎಲ್ಲ ಸಮಾಜಗಳನ್ನು ಸಮಾನ ದೃಷ್ಟಿಯಲ್ಲಿ ನೋಡಿಕೊಂಡು ಬಂದಿದ್ದು, ನಿಮ್ಮ ಆಶೀರ್ವಾದವೂ ನಮಗೆ ಬೇಕು ಎಂದು ಪರಮೇಶ್ವರ್ ಅವರು ಮಠಾಧೀಶರ ಬಳಿ ಬೇಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.