ರಾಜ್ಯ ರಾಜಕಾರಣದಲ್ಲಿನ ಆಣೆ-ಪ್ರಮಾಣದ ರಾಜಕಾರಣಕ್ಕೆ ಆರೋಪ-ಪ್ರತ್ಯಾರೋಪ ಕೇಳಿಬರುತ್ತಿರುವ ನಡುವೆಯೇ ಹಾಲಿ ಮತ್ತು ಮಾಜಿ ಸಿಎಂ ಧರ್ಮಸ್ಥಳಕ್ಕೆ ತೆರಳಲು ದಿನಾಂಕ (ಜೂನ್ 27) ನಿಗದಿಪಡಿಸಿದ್ದು, ಮತ್ತೊಂದೆಡೆ ಧರ್ಮಸ್ಥಳಕ್ಕೆ ತಾನು ಏಕಾಂಗಿಯಾಗಿ ತೆರಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ರಾಮನಗರ ತಾಲೂಕಿನ ಹುಣಸನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂವಿಧಾನದ ಚೌಕಟ್ಟಿನಲ್ಲಿ ಆಣೆ-ಪ್ರಮಾಣಕ್ಕೆ ಅವಕಾಶವಿಲ್ಲ. ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ ಧರ್ಮಸ್ಥಳಕ್ಕೆ ತೆರಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಜೂನ್ 26ರಂದು ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಧರ್ಮಸ್ಥಳಕ್ಕೆ ಏಕಾಂಗಿಯಾಗಿ ತೆರಳುವೆ ಎಂದ ಅವರು ತಾವು ಕುಟುಂಬದ ಸದಸ್ಯರನ್ನು ಕರೆತರುವುದಿಲ್ಲ ಎಂದು ಹೇಳಿದರು.
ತನ್ನ ವಿರುದ್ಧದ ಅಕ್ರಮಗಳ ದಾಖಲೆಯನ್ನು ಬಹಿರಂಗಪಡಿಸಿಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇರಳಕ್ಕೆ ತಮ್ಮ ಆಪ್ತರ ಮೂಲಕ ಸಂಧಾನಕ್ಕೆ ಆಹ್ವಾನಿಸಿರುವುದಾಗಿ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ, ಯಡಿಯೂರಪ್ಪ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವಂತೆ ಬಹಿರಂಗವಾಗಿ ಸವಾಲು ಹಾಕಿದ್ದರು.
ಈ ಸವಾಲನ್ನು ಸ್ವೀಕರಿಸಿರುವ ಕುಮಾರಸ್ವಾಮಿ ತಾನೂ ಧರ್ಮಸ್ಥಳಕ್ಕೆ ಬರಲು ಸಿದ್ದ ಎಂದಿದ್ದರು. ಆದರೆ ತಾನು ತನ್ನ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಆಗಮಿಸುವುದಾಗಿ ಯಡಿಯೂರಪ್ಪ ತಮ್ಮ ಆಪ್ತ ಸಚಿವ ಅಶೋಕ್ ಮೂಲಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ತಾನು ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬರಲಾರೆ, ಏಕಾಂಗಿಯಾಗಿ ತೆರಳುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.